ಮನ್​ ಕೀ ಬಾತ್​: ಛತ್​ ಪೂಜೆ ಹಿನ್ನೆಲೆ ಸೌರಶಕ್ತಿಯ ಮಹತ್ವ ಸಾರಿದ ಪ್ರಧಾನಿ ಮೋದಿ

PM modi
Published on

ನವದೆಹಲಿ: ಸೌರಶಕ್ತಿಯಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಸೌರ ಶಕ್ತಿಯನ್ನು ಭಾರತ ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಬಡ ಮತ್ತು ಮಧ್ಯಮ ವರ್ಗಗಳ ಜೀವನವನ್ನು ಸೌರಶಕ್ತಿ ಪರಿವರ್ತಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರೆಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ನ 94ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರಿಂದು (ಅ.30) ಮಾತನಾಡಿದರು.

ದೇಶಾದ್ಯಂತ ಇಂದು ಛತ್​ ಪೂಜೆ ಆಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಕೋರಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಇಂದು ದೇಶದ ಹಲವೆಡೆ ಸೂರ್ಯಾರಾಧನೆಯ ಮಹಾ ಹಬ್ಬವಾದ ಛತ್ ಅನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಭಾಗವಾಗಲು ಲಕ್ಷಾಂತರ ಜನರು ತಂತಮ್ಮ ಗ್ರಾಮಗಳಿಗೆ ತಲುಪಿದ್ದಾರೆ. ಛತ್ ಪೂಜೆಯ ಸೂರ್ಯಾರಾಧನೆಯು ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯ ಆಳವಾದ ಸಂಪರ್ಕದ ಸಾಕ್ಷಿಯಾಗಿದೆ. ಇಂದು ವಿದೇಶಗಳಲ್ಲಿಯೂ ಛತ್​ ಪೂಜೆಯ ಭವ್ಯವಾದ ಚಿತ್ರಗಳನ್ನು ನಾವು ನೋಡುತ್ತಿದ್ದೇವೆ ಅಂದ್ರೆ, ಭಾರತೀಯ ಸಂಸ್ಕೃತಿ ಮತ್ತು ಅದರ ನಂಬಿಕೆಯು ಪ್ರಪಂಚದ ಮೂಲೆ ಮೂಲೆಗಳಲ್ಲಿ ಛಾಪು ಮೂಡಿಸುತ್ತಿದೆ ಎಂದರ್ಥ ಎಂದು ಪ್ರಧಾನಿ ಮೋದಿ ಹೇಳಿದರು.

ಛತ್ ಹಬ್ಬವು ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವವನ್ನು ಸಹ ಒತ್ತಿಹೇಳುತ್ತದೆ. ಈ ಹಬ್ಬದ ಸಂದರ್ಭದಲ್ಲಿ ರಸ್ತೆಗಳು, ನದಿಗಳು, ಘಾಟ್‌ಗಳು ಮತ್ತು ವಿವಿಧ ನೀರಿನ ಮೂಲಗಳನ್ನು ಸಮುದಾಯ ಮಟ್ಟದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ದೆಹಲಿ, ಮುಂಬೈ ಮತ್ತು ಗುಜರಾತ್‌ನ ಹಲವು ಭಾಗಗಳೊಂದಿಗೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಛತ್ ಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ ಎಂದರು.

ನಾವು ಈಗಷ್ಟೇ ಪವಿತ್ರವಾದ ಛತ್ ಪೂಜೆ, ಸೂರ್ಯನ ಆರಾಧನೆಯ ಬಗ್ಗೆ ಮಾತನಾಡಿದ್ದೇವೆ. ಇಂದು ಸೂರ್ಯನನ್ನು ಆರಾಧಿಸುವುದರ ಜೊತೆಗೆ, ಅವನು ನಮಗೆ ನೀಡಿರುವ ಅದ್ಭುತವಾದ ವರದ ಬಗ್ಗೆ ನಾವೇಕೆ ಚರ್ಚಿಸಬಾರದು? ಆ ವರವೇ 'ಸೌರಶಕ್ತಿ' ಆಗಿದೆ. ಸೌರಶಕ್ತಿಯಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಸೌರ ಶಕ್ತಿಯನ್ನು ಭಾರತ ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಸೌರ ಶಕ್ತಿಯು ಬಡ ಮತ್ತು ಮಧ್ಯಮ ವರ್ಗಗಳ ಜೀವನವನ್ನು ಪರಿವರ್ತಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ತಮಿಳುನಾಡಿನ ಕಾಂಚೀಪುರಂನಲ್ಲಿ ತಿರು ಕೆ. ಎಜಿಲೋನ್ ಹೆಸರಿನ ಒಬ್ಬ ರೈತನಿದ್ದಾನೆ. ಅವರು 'ಪ್ರಧಾನಿ ಕುಸುಮ್ ಯೋಜನೆ'ಯ ಲಾಭವನ್ನು ಪಡೆದುಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡಿದ್ದು, ಜಮೀನಿಗೆ ವಿದ್ಯುತ್‌ಗಾಗಿ ಅವರು ಏನನ್ನೂ ಖರ್ಚು ಮಾಡಬೇಕಾಗಿಲ್ಲ ಎಂದರು.

ಗುಜರಾತಿನ ಮೆಹಸನಾ ಜಿಲ್ಲೆಯ ಮೊಧೇರ ಸೂರ್ಯ ಗ್ರಾಮದಲ್ಲಿರುವ ಬಹುತೇಕ ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಈಗ ಅಲ್ಲಿನ ಹಲವು ಮನೆಗಳಲ್ಲಿ ತಿಂಗಳಾಂತ್ಯದಲ್ಲಿ ವಿದ್ಯುತ್ ಬಿಲ್ ಬರುವುದಿಲ್ಲ. ಬದಲಿಗೆ ವಿದ್ಯುತ್ ಉತ್ಪಾದನೆಯಿಂದ ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲೂ ಭಾರತ ಅದ್ಭುತಗಳನ್ನು ಮಾಡುತ್ತಿದೆ. ಇಡೀ ವಿಶ್ವವೇ ಇಂದು ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ. ಭಾರತದ ಯುವಕರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದ ನಂತರ, ಅದರಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರಲಾರಂಭಿಸಿದವು. ಭಾರತವನ್ನು ಶಕ್ತಿಶಾಲಿಯಾಗಿಸಲು ವಿದ್ಯಾರ್ಥಿ ಶಕ್ತಿಯೇ ನಮಗಿರುವ ಆಧಾರ. ಇಂದಿನ ಯುವಕರು ತಮ್ಮ ಪ್ರತಿಭೆಯಿಂದ ಮುಂಬರುವ ವರ್ಷಗಳಲ್ಲಿ ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net