

ಕೋಲಾರ : ನಗರದೇವತೆ ಕೋಲಾರಮ್ಮ ದೇವಾಲಯ ಸೇರಿ ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರಗಳೊಂದಿಗೆ ನವರಾತ್ರಿ ಪೂಜೆಗೆ ಗುರುವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ಹಾಗೂ ಭಕ್ತರ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ ದೇವಾಲಯಗಳಲ್ಲೂ ನವರಾತ್ರಿಯ ವಿಶೇಷ ಪೂಜೆ ನಡೆಯುತ್ತಿದೆ. ನಗರದ ಶ್ರೀ ಕೋಲಾರಮ್ಮ ದೇವಾಲಯದಲ್ಲಿ ನವರಾತ್ರಿಯ ಮೊದಲ ದಿನ ವಿಶೇಷ ಪೂಜೆ ಹಾಗೂ ಪಾರ್ವತಿ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ ಪಂಜಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಪ್ರಧಾನ ಅರ್ಚಕ ಸೋಮಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಕೋಲಾರಮ್ಮ ದೇವಾಲಯದ ಬಳಿ ಇರುವ ಶ್ರೀ ಮಹಾಲಕ್ಷ್ಮೀ ಸಂಕಟಹರ ಗಣಪತಿ ದೇವಾಲಯದಲ್ಲಿ ನವರಾತ್ರಿ ವಿಶೇಷ ಪೂಜೆ, ಗಣಪತಿಗೆ ತೆಂಗಿನಕಾಯಿಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಪಂಜಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಕೋಟೆಯಲ್ಲಿನ ಶೃಂಗೇರಿ ಶ್ರೀಶಂಕರ ಮಠದಲ್ಲಿ ನವರಾತ್ರಿಯಂದು ಪ್ರತಿ ಸಂಜೆ ಶ್ರೀಶಾರದಾಂಬೆಗೆ ಅರಿಶಿಣ ಅಲಂಕಾರ ಮಾಡಲಾಗಿತ್ತು.