

ಶಿವಮೊಗ್ಗ: ನೂತನ ಶೈಕ್ಷಣಿಕ ವರ್ಷಾರಂಭದ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಮಕ್ಕಳು ಸಂಭ್ರಮದಿಂದ ಶಾಲೆಯಡೆಗೆ ಹೆಜ್ಜೆ ಹಾಕಿದರು. ಬಹುತೇಕ ಶಾಲೆಗಳಲ್ಲಿ ಮಕ್ಕಳ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೇಸಿಗೆ ರಜೆ ಬಳಿಕ ಮತ್ತೆ ಶಾಲೆಗೆ ತೆರಳಿದ ಮಕ್ಕಳ ಮೊಗದಲ್ಲಿ ಮಂದಹಾಸ ಕಾಣುತ್ತಿತ್ತು.
ತಳಿರು ತೋರಣ, ರಂಗೋಲಿ, ಬಲೂನ್‌ಗಳಿಂದ ಸಿಂಗರಿಸಲ್ಟಟ್ಟ ಶಾಲಾ ಆವರಣ, ಕೆಲ ಕೊಠಡಿಗಳಲ್ಲಿ ಆಕರ್ಷಕ ಛಾಯಾಚಿತ್ರಗಳು, ಮಕ್ಕಳ ಮನಸ್ಸನ್ನು ಮುದಗೊಳಿಸಿದವು. ಕೆಲವೆಡೆ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಮಕ್ಕಳಿಗೆ ಹೂವು ನೀಡುವ ಮೂಲಕ ಸ್ವಾಗತ ಕೋರಿದ್ದು ಮೊದಲ ದಿನದ ವಿಶೇಷವಾಗಿತ್ತು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿನಿಸು, ಚಾಕೋಲೆಟ್‌ಗಳನ್ನು ವಿತರಿಸಲಾಯಿತು.
ಮೊದಲ ದಿನವೇ ಪಠ್ಯ ಪುಸ್ತಕ ಪಡೆದ ಖುಷಿ ಅನೇಕ ಮಕ್ಕಳದ್ದಾಗಿತ್ತು. ಪುಸ್ತಕ ಸಿಗದ ಮಕ್ಕಳಿಗೆ ಶೀಘ್ರದಲ್ಲೇ ಪುಸ್ತಕ ಒದಗಿಸಲಾಗುವುದು ಎಂದು ಶಿಕ್ಷಕರು ಭರವಸೆ ನೀಡಿದ್ದರಿಂದ ಮಕ್ಕಳ ಬೇಸರ ದೂರವಾಯಿತು.
ಬೇಸಿಗೆ ರಜೆ ಮುಗಿಸಿ ಶಾಲೆಗೆ ಮೊದಲ ದಿನ ಮಕ್ಕಳನ್ನು ಕಳುಹಿಸುವಲ್ಲಿ ಪಾಲಕರ ಉತ್ಸಾಹ ಹೆಚ್ಚಿತ್ತು. ಅನೇಕ ಶಾಲೆಗಳ ಎದುರು ಪಾಲಕರು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಶಿವಮೊಗ್ಗ ದುರ್ಗಿಗುಡಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು.