ಬಾಲಿವುಡ್​ಗೆ ಹೊರಟ ಸಪ್ತಮಿ ಗೌಡ; ಯಾವ ಚಿತ್ರ? ಏನು ಕಥೆ?

Sapthami Gowda 1
Published on

ಬೆಂಗಳೂರು: 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡಗೆ ಒಂದು ಬಂಪರ್​ ಆಫರ್​ ಸಿಕ್ಕಿದೆ. 'ಕಾಂತಾರ' ನಂತರ ಅಭಿಷೇಕ್​ ಅಂಬರೀಷ್​ ಅಭಿನಯದ 'ಕಾಳಿ' ಚಿತ್ರದ ನಾಯಕಿಯಾಗಿ ಆಯ್ಕೆಯಾದ ಸಪ್ತಮಿ ಗೌಡ, ಇದೀಗ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟಿದ್ದಾರೆ.

'ದಿ ಕಾಶ್ಮೀರ್​ ಫೈಲ್ಸ್​' ಚಿತ್ರದ ನಂತರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, 'ದಿ ವ್ಯಾಕ್ಸಿನ್​ ವಾರ್' ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಮೊದಲ ಪೋಸ್ಟರ್​ ಸಹ ಬಿಡುಗಡೆ ಮಾಡಿದ್ದರು. ಈಗ ಆ ಚಿತ್ರಕ್ಕೆ ಸಪ್ತಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಪಲ್ಲವಿ ಜೋಷಿ, ಅನುಪಂ ಖೇರ್​ ಮತ್ತು ನಾನಾ ಪಾಟೇಕರ್​ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಲಕ್ನೋನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಹೈರಾಬಾದ್​​ನಲ್ಲಿ ಎರಡನೆಯ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ.

'ದಿ ವ್ಯಾಕ್ಸಿನ್​ ವಾರ್' ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸಪ್ತಮಿ ಗೌಡ ಒಪ್ಪಿಕೊಂಡಿದ್ದರೂ, ತಮ್ಮ ಪಾತ್ರ ಏನಿರಬಹುದು ಎಂಬ ವಿಷಯವನ್ನು ಮಾತ್ರ ಬಿಟ್ಟುಕೊಟ್ಟಲ್ಲ. ಇಲ್ಲಿ ಅವರು ನಾಯಕಿ ಎನ್ನುವುದಕ್ಕಿಂತ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುವುದಾಗಿ ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಸಪ್ತಮಿ, 'ದಿ ವ್ಯಾಕ್ಸಿನ್​ ವಾರ್' ಸೆಟ್​ನಲ್ಲೇ ಆಚರಿಸುತ್ತಿದ್ದಾರಂತೆ.

'ದಿ ವ್ಯಾಕ್ಸಿನ್​ ವಾರ್​' ಚಿತ್ರವು ನೈಜ ಘಟನೆಯೊಂದನ್ನು ಆಧರಿಸಿದೆ. ಚಿತ್ರವು ಇದೇ ವರ್ಷ ಸ್ವಾತಂತ್ರ್ಯ ದಿನದಂದು ಬಿಡಗುಡೆ ಮಾಡುತ್ತಿದ್ದಾರೆ. ಐ ಆಮ್​ ಬುದ್ಧ ಸಂಸ್ಥೆಯಡಿ ಈ ಚಿತ್ರವನ್ನು ನಟಿ ಪಲ್ಲವಿ ಜೋಷಿ ನಿರ್ಮಿಸುತ್ತಿದ್ದಾರೆ. 11 ಭಾಷೆಗಳಲ್ಲಿ ಈ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net