

ಬೆಂಗಳೂರು: ನಾಯಿ ಮರಿ, ನರಿ, ತೋಳವನ್ನು ಪ್ರಸ್ತಾಪಿಸಿ ಪರಸ್ಪರ ಟೀಕೆ ಮಾಡಿಕೊಂಡಿದ್ದ ರಾಜಕೀಯ ನಾಯಕರು, ಇದೀಗ ಸ್ಯಾಂಟ್ರೋ ರವಿ ಎಂಬಾತನ ಹೆಸರು ಬಳಸಿ ಟೀಕೆ ಟಿಪ್ಪಣಿ ನಡೆದಿದೆ. ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ಬಲವಂತವಾಗಿ ವಿವಾಹವಾದ ಪ್ರಕರಣದ ಆರೋಪಿಯಾಗಿರುವ ಸ್ಯಾಂಟ್ರೋ ರವಿ ಎಂಬಾತ ಆರೋಗ್ಯ ಸಚಿವ, ಶಿಕ್ಷಣ ಸಚಿವ, ಗೃಹ ಸಚಿವರೊಟ್ಟಿಗೆ ತೆಗೆದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸರ್ಕಾರಕ್ಕೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿರುವ ಕಾಂಗ್ರೆಸ್, ಮುಜುಗರ ಉಂಟುಮಾಡಲು ಪ್ರಯತ್ನಿಸಿದೆ.
ಇದು ಲಂಚ- ಮಂಚದ ಸರ್ಕಾರ ಎನ್ನುವುದು ಪ್ರತಿ ದಿನವೂ ಸಾಬೀತಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಇರುವುದು ಎರಡೇ ಲಂಚದ ಸದ್ದು, ಮಂಚದ ಸದ್ದು. ಇತ್ತೀಚೆಗೆ ಬೆಳಕಿಗೆ ಬಂದಷ್ಟೇ ವೇಗವಾಗಿ ಮುಚ್ಚಿಹಾಕಿದ್ದ ಸಿಎಂ ಕಾರ್ಯದರ್ಶಿಯ ಹನಿಟ್ರಾ್ಯಪ್ ಪ್ರಕರಣದ ಹಿಂದೆ ಇದೇ ಸ್ಯಾಂಟ್ರೋ ರವಿ ಪಾತ್ರವಿತ್ತೇ? ಕಡತ ನಾಪತ್ತೆಯಲ್ಲೂ ಕೈವಾಡವಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆಡಳಿತ ಪಕ್ಷದ ಮಂತ್ರಿಗಳು, ಅಧಿಕಾರಿಗಳೆಲ್ಲ ಈತನ ಜೇಬಿನಲ್ಲಿದ್ದಾರೆ. ಸಚಿವರೊಂದಿಗೆ ಸಹಕರಿಸಲು ಪತ್ನಿಗೆ ಕಿರುಕುಳ ಕೊಟ್ಟಿದ್ದನಂತೆ, ಯಾರು ಆ ಸಚಿವರು? ಹಾದಿ ಬೀದಿಯಲ್ಲಿರುವ ಅಕ್ರಮ ದಂಧೆಕೋರರು ಸರ್ಕಾರವನ್ನು ಅಲ್ಲಾಡಿಸುತ್ತಿದ್ದಾರೆಯೇ? ಎಂದು ಕುಟುಕಿದೆ. ಸಿಎಂ ಮಗನ ಜತೆಗೆ ಸ್ಯಾಂಟ್ರೋ ರವಿ ಇರುವ ಪೋಟೋ ಸಹ ಕಾಂಗ್ರೆಸ್ ಜಾಲತಾಣದಲ್ಲಿ ಹರಿಯಬಿಟ್ಟಿದೆ. ಆರೋಪಿಯೊಬ್ಬ ಹೇಗೆ ‘ಸ್ವೀಟ್ ಬ್ರದರ್’ ಆದ ಎಂದು ಪ್ರಶ್ನಿಸಿದೆ.
10 ಲಕ್ಷ ರೂ. ಯಾರಿಗೆ?: ವಿಧಾನಸೌಧದಲ್ಲಿ 10 ಲಕ್ಷ ರೂ. ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಜಗದೀಶ್ ಫೋನಿನಲ್ಲಿ ಅದೇ ಸಮಯದಲ್ಲಿ ಕೊನೆಯದಾಗಿ 3 ಬಾರಿ ಹೊರಹೋದ ಹಾಗೂ 2 ಬಾರಿ ಒಳಬಂದ ಕರೆ ಸಚಿವರೊಬ್ಬರ ಪಿಎಯದ್ದು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದು ಯಾವ ಸಚಿವರ ಪಿಎ? ಜಗದೀಶರನ್ನ ಬಿಟ್ಟು ಕಳಿಸುವಂತೆ ಪೊಲೀಸರಿಗೆ ಕರೆ ಮಾಡಿದ ಸಚಿವ ಯಾರು? ಬೊಮ್ಮಾಯಿ ಅವರೇ, ಈ ರಹಸ್ಯವನ್ನ ನೀವು ಹೇಳುವಿರಾ, ನಾವು ಹೇಳಬೇಕೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸ್ಯಾಂಟ್ರೋ ರವಿ ಯಾರು ಎಂಬುದು ನನಗೆ ತಿಳಿದಿಲ್ಲ. ನನ್ನ ಬಳಿ ಪ್ರತಿನಿತ್ಯ ಸಾಕಷ್ಟು ಜನರು ಸೆಲ್ಪಿ ಪಡೆಯಲು ಬರುತ್ತಾರೆ. ಅವರ ಹಿನ್ನೆಲೆ ಏನು ಎಂದು ಆ ಸಂದರ್ಭದಲ್ಲಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೆ ಸಚಿವರಿಗೆ ದುರಹಂಕಾರ ಎಂದು ಜನರು ಆಡಿಕೊಳ್ಳುತ್ತಾರೆ. | ಎಸ್.ಟಿ. ಸೋಮಶೇಖರ್ ಸಚಿವ
ಬೀದರ್: ಸ್ಯಾಂಟ್ರೋ ರವಿ ಮತ್ತು ಸಚಿವ ಎಸ್.ಟಿ.ಸೋಮಶೇಖರ್ ಜತೆಗಿರುವ ವಿಡಿಯೋವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ವೇಳೆ ವಿಡಿಯೋ ಬಿಡುಗಡೆ ಮಾಡಿದ್ದು, ರವಿ ಹಾಗೂ ಸಚಿವರು ಮಾತನಾಡುವ ವಿಡಿಯೋ ಇದಾಗಿದೆ. ಇವರಿಬ್ಬರ ಮಧ್ಯೆ ಯಾವ ರೀತಿ ಸಂಬಂಧ ಇದೆ? ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ, ನನ್ನನ್ನು ಕೆಣಕಿದ್ದಕ್ಕೆ ವಿಡಿಯೋ ಬಿಡುಗಡೆ ಮಾಡಿರುವೆ. ಇನ್ನೂ ಬಹಳಷ್ಟು ದಾಖಲೆಗಳಿವೆ ಎಂದು ಸಚಿವರಿಗೆ ಎಚ್ಡಿಕೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಬೆಳೆಸಿದ್ದಾರೆ. ಮುಖ್ಯಮಂತ್ರಿ ಅವರಿಗೆ ಸ್ಯಾಂಟ್ರೋ ರವಿ ಗೊತ್ತಿಲ್ಲ ಅಂದರೆ ಅದ್ಹೇಗೆ ಮೆಸೇಜ್ ಮಾಡುತ್ತಿದ್ದ? ಕುಮಾರಕೃಪದ ಸುತ್ತಮುತ್ತ ಏನು ನಡೆಯುತ್ತಿದೆ? ಆ ದಂಧೆ ಹೇಗೆ ನಡೆಯುತ್ತಿದೆ? ಎನ್ನುವುದು ಸಿಎಂ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.