ಜಾನುವಾರುಗಳಿಗೆ ಸಿಗದ ಸಂಜೀವಿನಿ: ಉದ್ಘಾಟನೆಯಾಗಿ ಒಂದೂವರೆ ವರ್ಷ ಕಳೆದರೂ ಆಗಿಲ್ಲ ಕಾರ್ಯಾರಂಭ

Cattle (1)
Published on

| ವಿಲಾಸ ಮೇಲಗಿರಿ ಬೆಂಗಳೂರು

ಮನೆ ಬಾಗಿಲಿಗೆ ಹೋಗಿ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಬೇಕಾದ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಬಾಲಗ್ರಹ ಪೀಡೆ ಕಾಡುತ್ತಿದೆ. ಪಶು ಸಂಜೀವಿನಿ ಹೆಸರಿನಲ್ಲಿ ಒಂದೂವರೆ ವರ್ಷದ ಹಿಂದೆ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಉದ್ಘಾಟನೆ ಗೊಂಡರೂ ಕಾರ್ಯಾರಂಭ ಮಾಡದೇ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ನಿಂತ ಕಡೆಯೇ ನಿಂತು ನಿಸ್ತೇಜಗೊಂಡಿವೆ.

ಎತ್ತು, ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ದಿನದ 24 ಗಂಟೆ ಕಾಲ ತುರ್ತು ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿತ್ತು. ಜಾನುವಾರು ಮಾಲೀಕರು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿದರೆ ತಕ್ಷಣ ಆಂಬುಲೆನ್ಸ್ ಬಂದು ಚಿಕಿತ್ಸೆ ನೀಡಬೇಕಿತ್ತು. ಆದರೆ ಈ ವಾಹನಗಳು ಈಗ ತುಕ್ಕು ಹಿಡಿದು ತೂಕಡಿಸುತ್ತಿವೆ. ರಾಜ್ಯದಲ್ಲಿ ಒಟ್ಟು ಪಶು ಚಿಕಿತ್ಸಾ ಕೇಂದ್ರಗಳು, ಪಶು ಆಸ್ಪತ್ರೆ, ಪಾಲಿಕ್ಲಿನಿಕ್ ಸೇರಿ ಒಟ್ಟು 4312 ಪಶು ವೈದ್ಯಕೀಯ ಸಂಸ್ಥೆಗಳಿವೆ. ಈ ಸಂಸ್ಥೆಗಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಸಂಚಾರ ಪಶು ಚಿಕಿತ್ಸಾ ವಾಹನಗಳಿಗೂ ಕೂಡ ಇದೇ ಸಮಯವನ್ನು ನಿಗದಿಪಡಿಸಿ ಟೆಂಡರ್ ಕೊಡಲಾಗಿದೆ. ಹಾಗಿದ್ದರೆ ಸಂಜೆ 5 ರಿಂದ ಬೆಳಗ್ಗೆ 9 ರವರೆಗೆ ತುರ್ತು ಚಿಕಿತ್ಸೆ ಸಿಗುವುದಾದರೂ ಹೇಗೆ? ತುರ್ತು ಚಿಕಿತ್ಸೆಯ ಉದ್ದೇಶವಾದರೂ ಹೇಗೆ ಸಾಫಲ್ಯವಾಗುತ್ತದೆ ಎಂಬ ಪ್ರಶ್ನೆ ತಲೆ ಎತ್ತಿದೆ.

ಸ್ಪಷ್ಟತೆ ಇಲ್ಲ: ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಮಹಾರಾಷ್ಟ್ರ ಮೂಲದ ಕಂಪನಿಯೊಂದಕ್ಕೆ ಮೂರು ವರ್ಷ ನಿರ್ವಹಣೆಗೆ 172 ಕೋಟಿ ರೂ. ಗಳಿಗೆ ಟೆಂಡರ್ ಕರೆದು ಗುತ್ತಿಗೆ ನೀಡಿದೆ. ಈ ಸಂಸ್ಥೆ ಈಗಾಗಲೆ ಹೊರಗುತ್ತಿಗೆ ಆಧಾರದಲ್ಲಿ ಪ್ರತಿ ವಾಹನಕ್ಕೆ ಒಬ್ಬ ಪಶು ವೈದ್ಯ, ಒಬ್ಬ ಅಟೆಂಡರ್, ಒಬ್ಬ ಡ್ರೖೆವರ್ ನೇಮಿಸಿದೆ. ಆದರೆ ಬಹುತೇಕ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಆದೇಶ ಬಂದಿಲ್ಲ. ನೇಮಕಗೊಂಡ ಅನೇಕರಿಗೆ ಮಾಸಿಕ ಸಂಬಳ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net