ಜ್ಞಾನದ ಸಂಜೀವಿನಿ ನೀಡುವ ಶಕ್ತಿ ಗುರು

9KDR3
ಜೋಡಿಹೋಚಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸಲಾಯಿತು. ತ್ರಿಮೂರ್ತಿ, ಗಿರೀಶ್, ಕೆಂಚಪ್ಪ, ಬಿ.ಸಿ.ರಮೇಶ್ ಮತ್ತಿತರಿದ್ದರು.
Published on

ಕಡೂರು: ಗುರುವಿನ ಜ್ಞಾನದ ಅನುಗ್ರಹ ದೊರೆತ ಕೂಡಲೇ ಅಜ್ಞಾನ ತಾನಾಗಿ ನಿವಾರಣೆಯಾಗಿ ಸುಜ್ಞಾನ ಲಿಸುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಜೋಡಿಹೊಚಿಹಳ್ಳಿ ಗ್ರಾಪಂ ಅಧ್ಯಕ್ಷ ತ್ರಿಮೂರ್ತಿ ಹೇಳಿದರು.
ಜೋಡಿಹೊಚಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು 2006-07ರಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರನ್ನು ಸಮಾನವಾಗಿ ಕಾಣುವ ಗುರುಪರಂಪರೆಯಲ್ಲಿ ಜ್ಞಾನದ ಧಾರೆ ಹರಿಸುವ ಗುರುಗಳನ್ನು ಗೌರವಿಸುವುದರಿಂದ ವಿದ್ಯಾರ್ಥಿಯ ಬದುಕು ಸಾರ್ಥಕವಾಗಲಿದೆ. ಇದು ಗುರು ಶಿಷ್ಯರ ಅಪೂರ್ವ ಸಂಗಮ. ಇದು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಭವ್ಯ ಕಾರ್ಯಕ್ರಮವಾಗಲಿದೆ ಎಂದರು.
ನಿಲಯದ ಹಿಂದಿನ ಮೇಲ್ವಿಚಾರಕ ಬಿ.ಸಿ.ರಮೇಶ್ ಮಾತನಾಡಿ, ಶಿಕ್ಷಕರಿಗೆ ಗೌರವ ನೀಡುವ ಗುರುವಂದನೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹೆಚ್ಚಿಸುತ್ತದೆ. ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ ಎಂದರು.
ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಪ್ರಕಾಶ್‌ಮೂರ್ತಿ ಮಾತನಾಡಿ, ಶಾಲೆ ಪ್ರಾಚಾರ್ಯ ಬಾಣೂರು ಗಿರೀಶ್ ನಮ್ಮ ಶಾಲೆ ವಿದ್ಯಾರ್ಥಿ. ನಾನು ಓದಿದ ಶಾಲೆ ಋಣ ತೀರಿಸಲು ಮುಂದಾಗಿರುವುದು ಶ್ಲಾಘನೀಯ. ಈ ಶಾಲೆ ಉನ್ನತಿ ಬಯಸಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯಲು ಮುಂದಾಗಿರುವ ಸಂಘಕ್ಕೆ ನಾನು ಕೈಜೋಡಿಸುತ್ತೇನೆ ಎಂದರು.
ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಸವಿತಾ, ಶಿವಕುಮಾರ್, ಉಮಾ ಶಂಕರ್, ಲಲಿತಾ, ಪಲ್ಲವಿ, ವೀಣಾ, ಹೊನ್ನಪ್ಪ, ಸಂತೋಷ್, ಮಹೇಶ್, ಬೀರೂರು ಕೆ.ಟಿ.ಗೀತಾ ಗಿರೀಶ್, ಗಜೇಂದ್ರ ಮೂರ್ತಿ ಮತ್ತಿತರರನ್ನು ಗೌರವಿಸಲಾಯಿತು. ಚಿಂತಕ ಚಟ್ನಳ್ಳಿ ಮಹೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಲೋಹಿತ್ ಕುಮಾರ್, ಉಪಾಧ್ಯಕ್ಷ ಪುನೀತ್, ಶಶಿನಾಯ್ಕ, ಕಲ್ಲಪ್ಪ, ಮಾರುತಿ, ಕಿರಣ್, ದಿಲೀಪ್, ಕೆಂಚಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net