105, 120, 135 ರೂ... ಸೆಲ್​ ನಂಬರ್​ 6ರಲ್ಲಿ ಕೊಲೆ ಅಪರಾಧಿ ಸಂಜಯ್​ ರಾಯ್​! ಕಠಿಣ ಕೆಲಸ ಮಾಡಿದ್ರೆ ದಿನಗೂಲಿ ಖಾತೆಗೆ | Sanjay Roy

ವಿಜಯವಾಣಿ - 2025-01-23T161939.161
Published on

Sanjay Roy: ಕಳೆದ ವರ್ಷ ಆಗಸ್ಟ್​ 09ರಂದು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿದ್ದ ಕೋಲ್ಕತದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್​ನನ್ನು ಕೋರ್ಟ್​ ಜ.18 ಅಪರಾಧಿ ಎಂದು ತೀರ್ಪು ನೀಡಿತು. ಯುವ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತೀರ್ಪು ಪ್ರಕಟವಾಗಿದ್ದೇ ಆದರೂ ವಿಧಿಸಲಾದ ಶಿಕ್ಷೆ ಬಗ್ಗೆ ವ್ಯಾಪಕ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ನ್ಯಾಯ ಸಿಕ್ಕಿಲ್ಲ

ಯುವ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿ ಆಗಿರುವ ಸಂಜಯ್​ ರಾಯ್​ಗೆ ಕೋರ್ಟ್​ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾಗಬೇಕಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿರುವುದು ಎಷ್ಟು ಸರಿ? ಎಂದು ಮೃತ ವೈದ್ಯೆಯ ಪೋಷಕರು ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ. ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆತನ ಜತೆಗೆ ಇನ್ನೂ ಕೆಲವರು ಇದ್ದಾರೆ. ಅವರನ್ನೂ ಶಿಕ್ಷೆಗೆ ಒಳಪಡಿಸಿ, ಗಲ್ಲಿಗೇರಿಸಿ ಎಂದು ಮನವಿ ಮಾಡಿದ್ದಾರೆ. ಇತ್ತ ಮಮತಾ ಬ್ಯಾನರ್ಜಿ ಸರ್ಕಾರ, ಅಪರಾಧಿಗೆ ಮರಣದಂಡನೆ ಶಿಕ್ಷೆ ಕೊಡಿಸಲು ಹೈಕೋರ್ಟ್​ಗೆ ಅರ್ಜಿ ಹಾಕುವುದಾಗಿ ತಿಳಿಸಿದೆ.

ಹೈಕೋರ್ಟ್​ ಮೊರೆ ಹೋದ ಸಿಬಿಐ

ಇದರ ಬೆನ್ನಲ್ಲೇ ಸಿಬಿಐ ಕೂಡ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದರ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಸದ್ಯದ ಮಟ್ಟಿಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಂಜಯ್​ ರಾಯ್​ನನ್ನು ಪ್ರೆಸಿಡೆನ್ಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಅಲ್ಲಿ ಆತನಿಗೆ ಅತ್ಯಂತ ಕಠಿಣ ಕೆಲಸಗಳನ್ನು ಕೊಡಲಾಗುವುದು. ಕೊಟ್ಟ ಕೆಲಸಗಳನ್ನು ಪೂರೈಸಿದರೆ ಮಾತ್ರ ದಿನಕ್ಕೆ 105 ರೂ. ವೇತನ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಕಠಿಣ ಶಿಕ್ಷೆ

ಈ ಬಗ್ಗೆ ಮಾತನಾಡಿದ ಜೈಲು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, "ಅಪರಾಧಿಗೆ ತನ್ನ ಸೆಲ್​ನಲ್ಲಿ ವಾಕಿಂಗ್​ ಮತ್ತು ವ್ಯಾಯಾಮ ಮಾಡಲು ಅವಕಾಶವಿರುತ್ತದೆ. ಆತ ಜೈಲಿನ ಬ್ಲಾಕ್‌ ಸುತ್ತಲೂ ಓಡಾಡಬಹುದು. ಅದು ಕೂಡ ಅಪರಾಧಿಯ ವಿಶೇಷ ಕಾವಲುಗಾರರ ಮೇಲ್ವಿಚಾರಣೆಯಲ್ಲಿ ಮಾತ್ರ ಅವಕಾಶ. ರಾಯ್​ ವಿಚಾರಣಾಧೀನ ಕೈದಿಯಾಗಿಲ್ಲದ ಹಿನ್ನೆಲೆ ಆತನನ್ನು ಕಠಿಣ ಕೆಲಸ ಮಾಡಲು ಬಳಸಿಕೊಳ್ಳಲಾಗುತ್ತದೆ. ಕೌಶಲ್ಯರಹಿತ ಕಾರ್ಮಿಕರಿಗೆ 105 ರೂ., ಅರೆ-ಕೌಶಲ್ಯಪೂರ್ಣ ಕಾರ್ಮಿಕರಿಗೆ 120 ರೂ. ಮತ್ತು ಕೌಶಲ್ಯಪೂರ್ಣ ಕಾರ್ಮಿಕರಿಗೆ 135 ರೂ. ದಿನಗೂಲಿ ನೀಡಲಾಗುತ್ತದೆ. ಈ ಹಣ ಜೈಲಿನಲ್ಲಿರುವ ಅಪರಾಧಿಯ ಖಾತೆಯಲ್ಲಿ ಸಂಗ್ರಹವಾಗಿರುತ್ತದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net