ಮಧ್ಯಪ್ರದೇಶದ ವೈರಸ್​ ಮಹಾರಾಷ್ಟ್ರಕ್ಕೆ ಬರಲು ಸಾಧ್ಯವೇ ಇಲ್ಲ: ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಂಜಯ್​ ರಾವತ್​

sanjay
Published on

ಮುಂಬೈ: ಕರೊನಾ ವೈರಸ್​ ದೇಶದ ಜನರಿಗೆ ಯಮರೂಪಿಯಾಗಿ ಕಾಡಲಾರಂಭಿಸಿದೆ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್​ಗೆ ಮಾತ್ರ ಕರೊನಾಕ್ಕಿಂತ ಭಯಾನಕವಾಗಿ ಬಿಜೆಪಿ ಕಾಡಲಾಂಭಿಸಿದೆ. ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವಾ ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ ಒಟ್ಟು 22 ಶಾಸಕರು ಕೈಗೆ ಕೈ ಕೊಟ್ಟು ಪಕ್ಷದಿಂದ ಹೊರನಡೆದಿದ್ದಾರೆ. ಶಾಸಕರ ಈ ನಡೆಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಸಹ ಭಯ ಹುಟ್ಟಿದ್ದು, ನೆರೆ ರಾಜ್ಯಗಳು ತಮ್ಮ ಸರ್ಕಾರದ ಬಲವನ್ನು ಸಮರ್ಥಿಸಿಕೊಳ್ಳಲಾರಂಭಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಮೈತ್ರಿ ಆಡಳಿತದಲ್ಲಿದೆ. ತಮ್ಮ ಮೈತ್ರಿ ಸರ್ಕಾರದ ಬಲದ ಕುರಿತಾಗಿ ಇಂದು ಶಿವಸೇನೆಯ ಮುಖಂಡ ಸಂಜಯ್​ ರಾವತ್​ ಮಾತನಾಡಿದ್ದಾರೆ. ಮಧ್ಯಪ್ರದೇಶದ ವೈರಸ್​ ಮಹಾರಾಷ್ಟ್ರಕ್ಕೆ ಬರಲು ಸಾಧ್ಯವಿಲ್ಲ. ಇಲ್ಲಿನ ಶಕ್ತಿ ವಿಭಿನ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.

ನೂರು ದಿನಗಳ ಹಿಂದೆ ಇದೇ ರೀತಿಯ ತಂತ್ರ ಇಲ್ಲಿ ನಡೆದಿದ್ದು, ಆ ತಂತ್ರ ವಿಫಲವಾಗಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಾಚರಣೆಗಳು ನಮ್ಮನ್ನು ಉಳಿಸಿದೆ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಸೋಮವಾರ ರಾತ್ರಿ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಮಂಗಳವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಾಜಿ ಸಚಿವನ ರಾಜೀನಾಮೆಯ ಬೆನ್ನಲ್ಲೇ 21 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net