

Sanjay Dutt: 90ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡ ಖಳನಟ ಸಂಜಯ್ ದತ್, ಹಲವಾರು ಸಿನಿಮಾಗಳಲ್ಲಿ ನಟಿಸಿ, ಹಿಂದಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ನಾಯಕ ನಟನಿಗಿಂತ ವಿಲನ್ ಪಾತ್ರಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಇವರು, ಇತ್ತೀಚೆಗಷ್ಟೇ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮ' ಶೋನಲ್ಲಿ ತಮ್ಮ ಜೀವನದ ಹಲವು ಕುತೂಹಲಕಾರಿ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡರು.
ಕೆಲವು ವೈಯಕ್ತಿಕ ತಪ್ಪುಗಳಿಂದಾಗಿ, ತಮ್ಮ ಜೀವನವನ್ನು ಜೈಲಿನಲ್ಲಿ ಕಳೆದ ಸಂಜಯ್ ದತ್, ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಆದಾಗ್ಯೂ, ಜೈಲಿನಲ್ಲಿ ತಮ್ಮ ಜೀವನ ಹೇಗಿತ್ತು? ಅಲ್ಲಿನ ಸಂಬಳ ಅವರಲ್ಲಿ ತಂದ ಬದಲಾವಣೆಗಳ ಕುರಿತು ಹಾಸ್ಯನಟ ಕಪಿಲ್ ಶರ್ಮಾ ಜತೆಗೆ ಸಂಜಯ್ ದತ್ ಮಾತನಾಡಿದ್ದಾರೆ.
"ನನ್ನ ಜೀವನದಲ್ಲಿ ನಡೆದ ಬಹುತೇಕ ವಿಷಯಗಳು ನನಗೆ ತೃಪ್ತಿಯನ್ನು ನೀಡಲಿಲ್ಲ. ತಾಯಿಯ ಅಗಲಿಕೆ ಘಟನೆಯನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಿಲ್ಲ. ಅದು ಕಾಡುತ್ತಲೇ ಇರುತ್ತದೆ. ಜೈಲಿನಲ್ಲಿ ಕಳೆದ ಕ್ಷಣಗಳು ಈಗಲೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿದೆ. ಅಲ್ಲಿದ್ದ ದಿನಗಳಲ್ಲಿ ಪ್ರತಿ ಕ್ಷಣವನ್ನು ಹೇಗೆ ಬಳಸಿಕೊಳ್ಳಬೇಕೆಂದು ಮಾತ್ರ ನಾನು ಯೋಚಿಸಿದೆ. ಜೈಲಿನಲ್ಲಿ ಹಲವು ಕೆಲಸಗಳನ್ನು ಮಾಡಿದೆ. ನಾನು ಪೇಪರ್ ಬ್ಯಾಗ್‌ಗಳನ್ನು ತಯಾರಿಸುವ ಮೂಲಕ ಹಣ ಸಂಪಾದಿಸಿದೆ. ಜೈಲಿನಲ್ಲಿ ರೇಡಿಯೋ ಕೇಂದ್ರವನ್ನು ಸಹ ಪ್ರಾರಂಭಿಸಿದೆ ಮತ್ತು ಕಾರ್ಯಕ್ರಮಗಳನ್ನು ಮಾಡಿದೆ" ಎಂದಿದ್ದಾರೆ.
"ನಾನು ಇತರ ಕೈದಿಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದೆ. ಜೈಲು ನನ್ನ ವೈಯಕ್ತಿಕ ಬೆಳವಣಿಗೆ ಮತ್ತು ಮಾನಸಿಕ ಸ್ಥಿರತೆಗಾಗಿ ಬಹಳಷ್ಟು ಸಹಾಯ ಮಾಡಿದೆ. ಅಲ್ಲದೆ, ಎರಡು ಕೊಲೆಗಳನ್ನು ಮಾಡಿದ ವ್ಯಕ್ತಿಯೊಬ್ಬರು ನನ್ನ ಗಡ್ಡವನ್ನು ಕತ್ತರಿಸಿ, ಮುಖಕ್ಕೆ ಕಳೆ ತಂದುಕೊಡಲು ಬಂದರು. ಆಗ, ನನ್ನ ಕಣ್ಣಂಚಲ್ಲಿ ನೀರು ತುಂಬಿತು" ಎಂದು ಸಂಜಯ್ ದತ್ ಹೇಳಿದ್ದಾರೆ. ನಟನ ಇನ್ನಷ್ಟು ಹೇಳಿಕೆಗಳು ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).