ಉಪರಾಷ್ಟ್ರಪತಿ ಚುನಾವಣೆ ; ಮೊದಲ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ! | Vice President Election

Vice President Election  modi voting
Published on

Vice President Election: ನಿಕಟಪೂರ್ವ ಉಪರಾಷ್ಟ್ರಪತಿ ಜಗದೀಪ್​​ ಧನಕರ್​​ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಮಂಗಳವಾರ (ಸೆಪ್ಟೆಂಬರ್​ 9) ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ತಮ್ಮ ಮತ ಚಲಾಯಿಸಿದರು.​

ಭಾರತದ 14 ನೇ ಉಪರಾಷ್ಟ್ರಪತಿ ಆಯ್ಕೆಗಾಗಿ ಸಂಸದರು ಮತ ಚಲಾಯಿಸಲು ಸಿದ್ಧರಾಗಿದ್ದು, ಸ್ಪರ್ಧೆಯ ಕಣದಲ್ಲಿ ಆಡಳಿತರೂಢ ಎನ್​​ಡಿಎ ಪಾಳಯದಿಂದ ಸಿ.ಪಿ.ರಾಧಾಕೃಷ್ಣನ್, ಇಂಡಿಯಾ ಕೂಟದಿಂದ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಪೈಪೋಟಿ ಇದೆ. ಸಂಸತ್ತಿನ ಭವನದೊಳಗೆ ಬೆಳಿಗ್ಗೆ 10 ಗಂಟೆಗೆ ಮತದಾನ ಪ್ರಾರಂಭವಾಗಿದೆ.

ಮಾಜಿ ಪ್ರಧಾನಿ ಎಚ್​​ ಡಿ ದೇವೆಗೌಡ,  ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ನಾಯ ಕರು ತಮ್ಮ ಹಕ್ಕು ಚಲಾಯಿಸಿದರು. ಇಂದು ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಾದ ಸ್ವಲ್ಪ ಹೊತ್ತಿನಲ್ಲಿ ಎಣಿಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿಯ ವೇಳೆಗೆ ದೇಶಕ್ಕೆ ಹೊಸ ಉಪರಾಷ್ಟ್ರಪತಿಗಳು ಆಯ್ಕೆಯಾಗಲಿದ್ದಾರೆ.

ಜುಲೈ 21 ರಂದು ಆರೋಗ್ಯ ಕಾರಣಗಳನ್ನು ನೀಡಿ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಮಾರು ಒಂದುವರೆ ತಿಂಗಳ ನಂತರ ಈ ಚುನಾವಣೆ ನಡೆದಿದೆ. ಸಂವಿಧಾನದ 67(ಎ) ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿದೆ.

ಪ್ರಮುಖ ಅಂಶಗಳು

1. ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮತ ಚಲಾಯಿಸಿದರು. ಈ ವಿಷಯವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಅವರು, 2025 ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ ಎಂದು ಬರೆದಿದ್ದಾರೆ. ಇದಾದ ನಂತರ ಮೋದಿ, ಪ್ರವಾಹ ಪೀಡಿತ ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗೆ ತೆರಳುತ್ತಾರೆ ಎಂದು ತಿಳಿದುಬಂದಿದೆ.

2. ಸಿ.ಪಿ. ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಸುಧರ್ಶನ್​​ ರೆಡ್ಡಿ ಇಬ್ಬರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು. ರೆಡ್ಡಿ, ಜನರ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಇದು ಸಂವಿಧಾನಕ್ಕಾಗಿ ನಡೆಯುತ್ತಿರುವ ಹೋರಾಟ. ನನಗೆ ದೊರೆತ ಪ್ರೀತಿ ಮತ್ತು ಸಮಾಜದ ಪ್ರತಿಕ್ರಿಯೆಗಾಗಿ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

3. ಎನ್​​ಡಿಎ ಅಭ್ಯರ್ಥಿ ರಾಧಾಕೃಷ್ಣನ್, ಇದು ಭಾರತೀಯ ರಾಷ್ಟ್ರೀಯತೆಯ ವಿಜಯ ಎಂದು ಬಣ್ಣಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಭಾರತ ವಿಕಸಿತ ಭಾರತವಾಗಬೇಕೆಂದು ನಮ್ಮ ಬಯಕೆ ಎಂದರು.

4. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವ ತೆಲಂಗಾಣದ ಬಿಆರ್‌ಎಸ್​​ ಪಕ್ಷಕ್ಕೆ, ನ್ಯಾಯಮೂರ್ತಿ ರೆಡ್ಡಿಗೆ ಮತ ನೀಡುವಂತೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ವಿನಂತಿಸಿದರು. ತೆಲಂಗಾಣಕ್ಕೆ ಇದು ಮಹತ್ವದ ದಿನವಾಗಿದೆ ಎಂದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net