2013ರ ಚಿತ್ರಕ್ಕೆ 11 ವರ್ಷಗಳ ನಂತರ ಬಿಡುಗಡೆ ಭಾಗ್ಯ ! ಯಾವುದು ಆ ಸಿನಿಮಾ?

Sanjana (4)
Published on

ಸಿನಿಮಾ ಸೆಟ್ಟೇರಿದ ಬಳಿಕ ಒಂದೆರಡು ವರ್ಷಗಳಲ್ಲಿ ಬಿಡುಗಡೆಯಾಗುವುದು ಸಾಮಾನ್ಯ. ಅಪರೂಪದ ಸಂದರ್ಭಗಳಲ್ಲಿ ಕೆಲ ಸಿನಿಮಾಗಳು ಮೂರ್ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದೂ ಇದೆ. ಇನ್ನು ಕೆಲ ಚಿತ್ರಗಳು ಪ್ರಾರಂಭವಾದರೂ, ಕಾರಣಾಂತರಗಳಿಂದ ರಿಲೀಸ್​ ಆಗುವುದೇ ಇಲ್ಲ. ಹಾಗೆ ಡಬ್ಬ ಸೇರಿದ ಅದೆಷ್ಟೋ ಚಿತ್ರಗಳಿವೆ. ಆದರೆ, ಕೆಲವೊಮ್ಮೆ ವರ್ಷಗಳ ನಂತರ ಆ ಸಿನಿಮಾಗಳಿಗೆ ಅದೃಷ್ಟ ಕೈಹಿಡಿಯುತ್ತದೆ.

ಅಂತಹ ಅದೃಷ್ಟ ಈಗ ಬಾಲಿವುಡ್​ ಸಿನಿಮಾ ಸಾಜಿದ್​ ಅಲಿ ನಿರ್ದೇಶನದ "ವೋ ಭಿ ದಿನ್​ ಥೇ' ಚಿತ್ರಕ್ಕೆ ಒಲಿದಿದೆ. ಬರೋಬ್ಬರಿ 11 ವರ್ಷಗಳ ನಂತರ ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದೆ. ಅಂದಹಾಗೆ, "ದಿಲ್​ ಬೆಚಾರಾ', "ರಾಷ್ಟ್ರ ಕವಚ್​ ಓಂ', "ಧಕ್​ ಧಕ್​' ಮತ್ತು "ಖಡಕ್​ ಸಿಂಗ್​' ಖ್ಯಾತಿಯ ನಟಿ ಸಂಜನಾ ಸಂಘಿ ನಾಯಕಿಯಾಗಿ ನಟಿಸಿದ್ದ ಮೊದಲ ಚಿತ್ರವಿದು.

ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಸಂಜನಾ, "ನಾನಾಗ 12ನೇ ತರಗತಿಯಲ್ಲಿದ್ದೆ. ಆ ಸಮಯದಲ್ಲಿ 3 ತಿಂಗಳ ಕಾಲ ಜಮ್ಶೇಡ್​ಪುರಕ್ಕೆ ಶೂಟಿಂಗ್​ಗೆ ತೆರಳಬೇಕಿತ್ತು. 12 ತಾಸುಗಳ ಶಿಫ್ಟ್​ನಲ್ಲಿ ಶೂಟಿಂಗ್​ ನಡೆಯುತ್ತಿತ್ತು. ಅದಕ್ಕೂ ಮುನ್ನ ಮತ್ತು ಚಿತ್ರೀಕರಣದ ಬಳಿಕ, ನಿತ್ಯವೂ ಓದುತ್ತಿದ್ದೆ. ಪರೀಕ್ಷೆಯಲ್ಲಿ ಶೇಕಡಾ 96.50 ಅಂಕ ಪಡೆದೆ. ಈ ಸಿನಿಮಾ ನನಗೆ ಅತ್ಯುತ್ತಮ ಫ್ರೆಂಡ್ಸ್​​ ನೀಡಿದೆ. 11 ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಖುಷಿಯಿದೆ' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net