

ಕಡೂರು: ಗೆರಿಲ್ಲಾ ಯುದ್ದದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ ಸಂಗೊಳ್ಳಿ ರಾಯಣ್ಣ ಸ್ವತಂತ್ರ ನಾಡಿನ ಕನಸು ಕಟ್ಟಿಕೊಂಡೇ ಹುತಾತ್ಮರಾದರು. ಬ್ರಿಟಿಷರ ವಿರುದ್ಧ ರಾಯಣ್ಣ ಸಾರಿದ ಸಮರ ಅವಿಸ್ಮರಣಿಯ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಚ್.ಎ.ಪ್ರಸನ್ನ ಹೇಳಿದರು.
ಬಸ್‌ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಯುವಕ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಸಾಹತುಶಾಹಿ ಸೈನ್ಯದ ವಿರುದ್ಧ ಸಿಡಿದೆದ್ದ ರಾಯಣ್ಣನಿಗೆ ಅಪಾರ ಜನ ಬೆಂಬಲ ದೊರೆತಿತ್ತು. ಕಿತ್ತೂರ ಸಂಸ್ಥಾನದ ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಶತ್ರುಗಳ ವಿರುದ್ಧ ಹೋರಾಡಿದ ರಾಯಣ್ಣನ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭೆ ಸದಸ್ಯ ಮರುಗುದ್ದಿ ಮನು, ಶ್ರೀಕಾಂತ್, ಸೈಯಾದ್ ಯಾಸೀನ್, ಮುಖಂಡರಾದ ಕೆ.ಜಿ. ಶ್ರೀನಿವಾಸ್‌ಮೂರ್ತಿ, ಕದಂಬ ವೆಂಕಟೇಶ್, ರವಿಕುಮಾರ್ ಮತ್ತಿತರಿದ್ದರು.
ಕೆಎಲ್‌ವಿ ವೃತ್ತದ ಸಮೀಪ ಸಂಗೊಳ್ಳಿ ರಾಯಣ್ಣ ಯುವ ಸೇನೆ ಮತ್ತು ಶ್ರೀ ರಾಮ ಯುವಕ ಸಂಘದಿಂದ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂಗೊಳ್ಳಿರಾಯಣ್ಣ ಜಯಂತಿ ಆಚರಿಸಲಾಯಿತು ಶಶಿಕುಮಾರ್, ಚೇತನ್‌ಗಿಡ್ಡಿ, ನವೀನ್, ದೀಪು, ತಿಲಕ, ಹರೀಶ್, ಆಕಾಶ್, ಯಶ್ವಂತ್ ಇದ್ದರು.