

| ಶ್ರವಣ್ ಕುಮಾರ್ ನಾಳ ಮಂಗಳೂರು
ಕಂಕನಾಡಿ ಸಮೀಪದ ನಾಗುರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಪೋಟದ ಟಾರ್ಗೆಟ್ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮವಾಗಿತ್ತು ಎಂಬ ಅಂಶ ಬೆಳಕಿಗೆ ಬಂದ ಬೆನ್ನಲ್ಲೇ, ಆ ಕಾರ್ಯಕ್ರಮ ಕೈತಪ್ಪಿಹೋಗಿದ್ದಕ್ಕೆ ಕರಾವಳಿಯ ಸಂಘ ಪರಿವಾರದ ಶಕ್ತಿಕೇಂದ್ರ ಮಣ್ಣಗುಡ್ಡ ಗಾಂಧಿನಗರದಲ್ಲಿರುವ ‘ಸಂಘನಿಕೇತನ’ವನ್ನೇ ಟಾರ್ಗೆಟ್ ಮಾಡಲಾಗಿತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಹಾಗೂ ಐಸಿಸ್ ನಂಟು ಹೊಂದಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡು ಪರಾರಿಯಾಗಿದ್ದ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ಈ ಕೃತ್ಯದ ಪ್ರಮುಖ ಆರೋಪಿ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಸ್ಫೋಟ ಸ್ಥಳದಲ್ಲಿ ಸಿಕ್ಕಿದ ಆತನ ಅಂಡ್ರಾಡ್ಡ್ ಮೊಬೈಲ್ ಪ್ರಮುಖ ಸಾಕ್ಷ್ಯಾಗಿ ಲಭಿಸಿದೆ. ಈಗಾಗಲೆ ಮೊಬೈಲ್ ಅನ್ನು ಪರಿಶೀಲನೆ ನಡೆಸಿದ ಪೊಲೀಸರು ಆತನಿಗಿರುವ ಸಂಪರ್ಕದ ಪ್ರಮುಖ ದಾಖಲೆ ಸಂಗ್ರಹಿಸಿದ್ದಾರೆ.
8 ಬಾರಿ ಲೊಕೇಷನ್ ಸರ್ಚ್: ಆರೋಪಿ ಶಾರೀಕ್ ಕುಕ್ಕರ್ ಬಾಂಬ್ ಸಹಿತ ಬಸ್ನಲ್ಲಿ ಮೈಸೂರು- ಮಡಿಕೇರಿ- ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ್ದ. ಆತ ಮೈಸೂರಿನಲ್ಲಿ ಹೊರಡುವ ಸಂದರ್ಭ ಬಸ್ ಮಿಸ್ ಆಗಿದ್ದರಿಂದ ‘ಟಾರ್ಗೆಟ್ ಸಿಎಂ’ ಯೋಜನೆ ವಿಫಲವಾಯಿತು. ಮಂಗಳೂರಿಗೆ ತಡವಾಗಿ ಆಗಮಿಸುವ ಅರಿವಾಗಿದ್ದರಿಂದ ತಾನು ಮಂಗಳೂರು ತಲುಪುವ ನಿಖರ ಸಮಯ ತಿಳಿದುಕೊಳ್ಳಲು ಮೊಬೈಲ್ನಲ್ಲಿ ಪದೇಪದೆ ಲೊಕೇಶನ್ ಸರ್ಚ್ ಮಾಡುತ್ತಿದ್ದ. ಈತ ಗೂಗಲ್ನಲ್ಲಿ ಒಂದೇ ದಿನದಲ್ಲಿ 8 ಬಾರಿ ಮಂಗಳೂರು ಲೊಕೇಷನ್ ಸರ್ಚ್ ಮಾಡಿದ್ದ. ಮಂಗಳೂರು ತಲುಪುತ್ತಿದ್ದಂತೆ ಕೊನೆಯದಾಗಿ 2 ಬಾರಿ ಮಣ್ಣಗುಡ್ಡ-ಗಾಂಧಿನಗರ ಲೊಕೇಷನ್ ಸರ್ಚ್ ಮಾಡಿರುವ ದಾಖಲೆ ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಜತೆಗೆ ಆತ ಮಂಗಳೂರು ಟ್ರಾಫಿಕ್ ಬಗ್ಗೆಯೂ ಸರ್ಚ್ ಮಾಡಿರುವ ಬಗ್ಗೆ ಐಬಿ ದಾಖಲೆ ಸಂಗ್ರಹಿಸಿದೆ. ಆರೋಪಿ ಮೈಸೂರಿನಿಂದ ಮಂಗಳೂರು ತಲುಪುವ ವೇಳೆ ಮೂವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬಗ್ಗೆಯೂ ಮಾಹಿತಿ ಲಭಿಸಿದೆ.
ಮಣ್ಣಗುಡ್ಡ-ಗಾಂಧಿನಗರದಲ್ಲೇನಿದೆ?: ಆರೋಪಿ ಮೈಸೂರಿನಿಂದ ಮಂಗಳೂರು ತಲುಪುತ್ತಿದ್ದಂತೆ 2 ಬಾರಿ ಮೊಬೈಲ್ನಲ್ಲಿ ಮಣ್ಣಗುಡ್ಡ-ಗಾಂಧಿನಗರದ ಲೊಕೇಶನ್ ಸರ್ಚ್ ಮಾಡಿರುವ ಬಗ್ಗೆ ಈಗಾಗಲೆ ಇಂಟೆಲಿಜೆನ್ಸ್ ಬ್ಯೂರೊ ತನಿಖೆ ಮುಂದುವರಿಸಿದೆ. ಮಾಹಿತಿ ಪ್ರಕಾರ ನ.19ರಂದು ಸಿಎಂ ಮಂಗಳೂರು ಪ್ರವಾಸ ವೇಳೆ ಸಂಘನಿಕೇತನಕ್ಕೆ ಭೇಟಿ ನೀಡುವ ಮಾಹಿತಿ ಇತ್ತು. 2 ಬಾರಿ ಶ್ವಾನದಳ ಹಾಗೂ ಬಾಂಬ್ ಸ್ಕಾ್ವಡ್ ತಂಡ ಸಂಘನಿಕೇತನಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿತ್ತು. ಕೊನೇ ಕ್ಷಣದಲ್ಲಿ ಸಿಎಂ ಸಂಘನಿಕೇತನ ಭೇಟಿ ರದ್ದಾಗಿತ್ತು. ಆದರೆ ಇದೇ ಸಂಘನಿಕೇತನದಲ್ಲಿ ಆರೆಸ್ಸೆಸ್ ಅಧೀನದ ಕೇಶವ ಸ್ಮೃತಿ ಸಂವರ್ಧನ ಸಮಿತಿಯಿಂದ ರಾಜ್ಯಮಟ್ಟದ ಮಕ್ಕಳ ಹಬ್ಬ ಆಯೋಜಿಸಲಾಗಿದ್ದು, ದೇಶದ ಪ್ರಮುಖ ಆರೆಸ್ಸೆಸ್ ನಾಯಕರು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಇದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಸಂಘನಿಕೇತನದಲ್ಲಿ ವಿದ್ಯಾರ್ಥಿಯಂತೆ ಆಗಮಿಸಿ ಕುಕ್ಕರ್ ಬಾಂಬ್ ಸ್ಪೋಟಿಸಲು ಪ್ಲ್ಯಾನ್ ರೂಪಿಸಿರುವ ಬಗ್ಗೆ ತನಿಖೆ ನಡೆಯುತ್ತಿದೆ.
ಉದ್ದೇಶಿತ ಭಯೋತ್ಪಾದಕ ಕೃತ್ಯ ವಿಫಲಗೊಂಡಿರುವುದು ನಿಜ. ಆರೋಪಿ ಯಾವ ಸ್ಥಳದಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಲು ಯೋಜನೆ ರೂಪಿಸಿದ್ದ ಎಂಬುದನ್ನು ಪ್ರಾಥಮಿಕ ತನಿಖೆಯಿಂದ ಗುರುತಿಸಲಾಗಿದೆ. ತನಿಖಾಧಿಕಾರಿಗಳು ಆರೋಪಿಯ ಹೇಳಿಕೆ ಪಡೆದ ಮೇಲೆ ಹೆಚ್ಚಿನ ಮಾಹಿತಿ ನೀಡಲಾಗುವುದು. | ಆರಗ ಜ್ಞಾನೇಂದ್ರ ಗೃಹಸಚಿವ
ನಾಲ್ವರು ವಶಕ್ಕೆ: ಗೋಡೆಬರಹ ಪ್ರಕರಣದ ಬಳಿಕ ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದರೂ ಆತನ ಮೇಲೆ ನಿಗಾ ಇರಿಸದಿರುವುದು ಇಲಾಖೆಯ ವೈಫಲ್ಯವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಜಿಪಿ ಪ್ರವೀಣ್ ಸೂದ್, ಆ ಸಂದರ್ಭದಲ್ಲೂ ಎಲ್ಲ ರೀತಿ ತನಿಖೆಯ ಪ್ರಯತ್ನ ನಡೆದಿದೆ. ಪ್ರಸಕ್ತ ಬೆಂಗಳೂರು ಸೇರಿ ಎಂಟು ಕಡೆ ದಾಳಿ ನಡೆಸಿ ನಾಲ್ಕು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು. 25 ದಿನ ಚಿಕಿತ್ಸೆ ಅಗತ್ಯ: ಆರೋಪಿ ಮಹಮದ್ ಶಾರೀಕ್ನ ಶ್ವಾಸಕೋಶದೊಳಗೆ ಹೊಗೆ ತುಂಬಿದ ಕಾರಣ ಗುಣವಾಗಲು ಇನ್ನೂ 25 ದಿನಗಳ ಚಿಕಿತ್ಸೆ ಬೇಕಾಗಬಹುದು. ಆಸ್ಪತ್ರೆಯಲ್ಲಿ 8 ವಿಶೇಷ ತಜ್ಞ ವೈದ್ಯರು ಅವನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕುಕ್ಕರ್ ಸ್ಪೋಟಗೊಳ್ಳುವಾಗ ಅದರ ಮುಚ್ಚಳ ಆತನ ಗಂಟಲಿನ ಭಾಗಕ್ಕೆ ತಾಗಿ ಗಾಯವಾಗಿದೆ. ಪೊಲೀಸ್ ಅಧಿಕಾರಿ ಪ್ರತಿದಿನ ಆತನ ಅಪ್ಡೇಟ್ ನೋಡಿಕೊಳ್ಳುತ್ತಿದ್ದಾರೆ. ಆತ ಬಿಡುಗಡೆಯಾದ ತಕ್ಷಣ ವಿಚಾರಣೆ ಆರಂಭಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೈಸೂರು: ಉಗ್ರ ಶಾರೀಕ್ ನಗರದಲ್ಲಿ ನೆಲೆಯೂರಲು ಪ್ರಮುಖ ಕಾರಣ ಆತ ಬಳಕೆ ಮಾಡಿದ್ದ ಆಧಾರ್ ನಕಲಿ ಕಾರ್ಡ್. ಹೀಗಾಗಿ, ಆತನಿಗೆ ಆಧಾರ್ ನಕಲಿ ಕಾರ್ಡ್ ಸೃಷ್ಟಿಸಿಕೊಟ್ಟವರು ಹಾಗೂ ಆತನ ಉಗ್ರ ಕೃತ್ಯಕ್ಕೆ ಸಹಕರಿಸಿದವರ ಹುಡುಕಾಟ ನಗರದಲ್ಲಿ ನಡೆಯುತ್ತಿದೆ. ಮೊಬೈಲ್ ತರಬೇತಿ ಪಡೆಯಲೂ ಆಧಾರ್ ಕಾರ್ಡ್ ಬಳಸಿಕೊಂಡಿದ್ದ. ಆರೋಪಿ ಮೈಸೂರಿಗೆ ಬಂದು ಆಧಾರ್ ಕಾರ್ಡ್ ಸೃಷ್ಟಿ ಮಾಡಿಕೊಂಡನೇ ಅಥವಾ ಬರುವ ಮುನ್ನವೇ ಆತನ ಬಳಿ ಕಾರ್ಡ್ ಇತ್ತೇ ಎಂಬ ಮಾಹಿತಿ ಇಲ್ಲ. ಹೀಗಾಗಿ, ಆತ ಓಡಾಡಿರುವ ಜಾಗ ಹಾಗೂ ಭೇಟಿ ಮಾಡಿರುವ ಜನರನ್ನು ಪೊಲೀಸರು ಸಂರ್ಪಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನಿಗೆ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿಕೊಟ್ಟವರು ಹಾಗೂ ಸಹಕರಿಸಿದವರು ಪತ್ತೆಯಾದರೆ ಉಗ್ರಕೃತ್ಯದ ಸಾಕಷ್ಟು ಮಾಹಿತಿಗಳು ಹೊರಬೀಳಲಿವೆ.
ಶಾರೀಕ್ ಊಬರ್, ಓಲಾ ಟ್ಯಾಕ್ಸಿ ಬಳಕೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರಿಂದಲೂ ಆತನ ಕುರಿತು ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ. ಆರೋಪಿ ವಾಸವಿದ್ದ ಲೋಕನಾಯಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೊಬೈಲ್ ಶಾಪ್ಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೊಬೈಲ್ ತರಬೇತಿ ಪಡೆಯುವ ಸಲುವಾಗಿ ಶಾರೀಕ್ 10 ಹಳೆಯ ಮೊಬೈಲ್ ಸಂಗ್ರಹಿಸಿದ್ದನು. ಆ ಮೊಬೈಲ್ಗಳನ್ನು ತರಬೇತಿ ಗೋಸ್ಕರ ಬಳಕೆ ಮಾಡಿದ್ದನು. ಇದಲ್ಲದೆ, ಹೆಚ್ಚುವರಿ ಮೊಬೈಲ್ಗಳನ್ನೂ ಸಂಗ್ರಹಿಸಿ ಅವುಗಳನ್ನು ವಿಧ್ವಂಸಕ ಕೃತ್ಯಕ್ಕೆ ಬಳಕೆ ಮಾಡಿದ್ದಾನೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಹಳೇಬೀಡು: ಭಯೋತ್ಪಾದನೆ ನಿಗ್ರಹಕ್ಕೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಗುಪ್ತಚರ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಚಿಂತಿಸಿದ್ದು, ಈ ಸಂಬಂಧ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಯೋತ್ಪಾದಕರ ಸ್ಲೀಪರ್ ಸೆಲ್ಗಳು ಎಲ್ಲ ರಾಜ್ಯಗಳಲ್ಲಿವೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಈ ಸ್ಲೀಪರ್ ಸೆಲ್ಗಳು ಸಂಚರಿಸುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಆದ್ದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಪರಸ್ಪರ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ವ್ಯವಸ್ಥೆ ರೂಪಿಸಿಕೊಂಡರೆ ಪರಿಣಾಮಕಾರಿಯಾಗಿ ಉಗ್ರ ಚಟುವಟಿಕೆಗಳನ್ನು ತಡೆಯಬಹುದು ಎಂದರು.
ಮಂಗಳೂರು: ಮಂಗಳೂರಿನ ನಾಗುರಿ ಬಳಿ ನ.19ರಂದು ಆಟೋ ರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಎರಡು ದಿನಗಳಲ್ಲಿ ಎನ್ಐಎಗೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳ, ಸಂತ್ರಸ್ತ ಹಾಗೂ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿಯ ಆಸ್ಪತ್ರೆಗೆ ಬುಧವಾರ ಡಿಜಿಪಿ ಪ್ರವೀಣ್ ಸೂದ್ ಅವರೊಂದಿಗೆ ಭೇಟಿ ನೀಡಿದ ಸಚಿವರು, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ಪೊಲೀಸ್ ತನಿಖೆಯ ಜತೆ ಎನ್ಐಎ ಸಹಿತ ಕೇಂದ್ರ ತನಿಖಾ ತಂಡಗಳು ಸಹಕರಿಸುತ್ತಿವೆ. ಸೋಮವಾರವೇ ಈ ಸಂಬಂಧ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಆದೇಶ ಬಂದ ತಕ್ಷಣ ಎಲ್ಲ ದಾಖಲೆಗಳನ್ನು ಎನ್ಐಎಗೆ ಹಸ್ತಾಂತರಿಸಲಾಗುವುದು. ಆ ಬಳಿಕವೂ ಪೊಲೀಸ್ ಇಲಾಖೆ ಎನ್ಐಎಗೆ ಪೂರ್ಣ ಸಹಕಾರ ನೀಡಲಿದೆ ಎಂದರು.
ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ: ಪ್ರಕರಣದ ಸಂತ್ರಸ್ತ, ಆಟೋ ಚಾಲಕ ಪುರುಷೋತ್ತಮ ಹಾಗೂ ಆರೋಪಿ ಮೊಹಮ್ಮದ್ ಶಾರೀಕ್ನ ಆರೋಗ್ಯ ಸುಧಾರಣೆಗೆ 8 ಮಂದಿ ತಜ್ಞ ವೈದ್ಯರ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರೋಪಿ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆ ನಡೆದು, ಪೂರ್ಣ ಮಾಹಿತಿ ಲಭ್ಯವಾಗಲಿದೆ. ಗಾಯಾಳು ರಿಕ್ಷಾ ಚಾಲಕನ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ಸರ್ಕಾರವೇ ಭರಿಸಲಿದೆ. ಅವರ ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ರ್ಚಚಿಸಿ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಶಿಕ್ಷೆ ಆಗುವಂತೆ ಸಾಕ್ಷ್ಯ ಸಂಗ್ರಹ: ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ದೇಶದ ಹಲವೆಡೆ ಸುತ್ತಾಡಿದ್ದಾನೆ. ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಸಂಗ್ರಹಿಸಿದ್ದಾರೆ. ಆರೋಪಿಯ ಹಿನ್ನೆಲೆ, ಆತನಿಗೆ ಹಣಕಾಸಿನ ನೆರವು, ಆತನಿಗೆೆ ಬೆಂಬಲ ನೀಡುವವರು ಯಾರಿದ್ದಾರೆ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿಗೆ ಸೂಕ್ತ ಶಿಕ್ಷೆ ಆಗುವ ನಿಟ್ಟಿನಲ್ಲಿ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
50 ಸಾವಿರ ರೂ. ನೆರವು: ಸ್ಪೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕ ಪುರುಷೋತ್ತಮ ಅವರನ್ನು ಭೇಟಿ ಮಾಡಿದ ಗೃಹ ಸಚಿವರು ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಕುಟುಂಬಸ್ಥರಿಗೆ ವೈಯುಕ್ತಿಕ ನೆಲೆಯಲ್ಲಿ 50 ಸಾವಿರ ರೂ. ಚೆಕ್ ವಿತರಿಸಿ, ಕುಟುಂಬಕ್ಕೆ ಧೈರ್ಯ ತುಂಬಿದರು.
ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿ ಕದಡುವುದು, ಸಾರ್ವಜನಿಕವಾಗಿ ಭಯ ಹುಟ್ಟಿಸುವುದು ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತಿ ಅಗತ್ಯ. ಆತನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರಲಿದೆ. ಎನ್ಐಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜತೆಗೆ ಆರಂಭದಿಂದಲೂ ಇವೆ. ಅಧಿಕೃತವಾಗಿ ಸದ್ಯದಲ್ಲೇ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಆಗಲಿದೆ ಎಂದರು.
ತಮಿಳುನಾಡು, ಕೇರಳ ಡಿಜಿಪಿಗಳ ಸಂಪರ್ಕ: ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಉಗ್ರ ಮಹಮದ್ ಶಾರೀಕ್ಗೆ ತಮಿಳುನಾಡು, ಕೇರಳದ ಸಂಪರ್ಕ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಡಿಜಿಪಿಗಳು ಸಂಪರ್ಕದಲ್ಲಿದ್ದಾರೆ. ಅಲ್ಲಿಯೂ ಪೊಲೀಸರು ಅಲರ್ಟ್ ಆಗಿ ತನಿಖೆ ನಡೆಸುತ್ತಿದ್ದಾರೆ. ಮೂರು ರಾಜ್ಯದ ಪೊಲೀಸ್ ಇಲಾಖೆ ಒಟ್ಟಾಗಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿದವರನ್ನು ಮಟ್ಟ ಹಾಕಲು ಶ್ರಮಿಸುತ್ತಿವೆ ಎಂದು ಹೇಳಿದರು.