

ಬೆಂಗಳೂರು: ಬಿಜೆಪಿ ರಾಜ್ಯ ನಾಯಕತ್ವದ ಕುರಿತು ಬಹಿರಂಗ ಚರ್ಚೆ, ಅಸಮಾಧಾನ ಮತ್ತೆ ಮುನ್ನೆಲೆಗೆ ಬಂದು ಪಕ್ಷದೊಳಗೆ ತಳಮಳ ಹೆಚ್ಚಿಸಿದೆ. ಇದೇ ಹೊತ್ತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಹಾಗೂ ಪಕ್ಷದ ರಾಜ್ಯ ನಾಯಕರ ಜಂಟಿ ಸಭೆ ನಿಗದಿಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಸಂಘದ ಕಚೇರಿ ‘ಕೇಶವ ಕೃಪಾ’ದಲ್ಲಿ ಶುಕ್ರವಾರ ಮಧ್ಯಾಹ್ನ ಜಂಟಿ ಸಭೆ ನಡೆಯಲಿದೆ. ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನ, ಸಮನ್ವಯದ ಕುರಿತಾಗಿ ಚರ್ಚೆಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ನಡೆದ ಸಭೆಯ ಮುಂದುವರಿದ ಭಾಗವೆಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ರಚಿಸಿದ ಕೋಮುದ್ವೇಷ ಪ್ರಚೋದನೆ ನಿಗ್ರಹ ವಿಶೇಷ ಕಾರ್ಯಪಡೆ ಕಾರ್ಯವೈಖರಿ, ಕರಾವಳಿ ಪ್ರದೇಶದ ಸ್ಥಿತಿಗತಿ, ಹಿಂದು, ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾವೆಗಳು, ಪಕ್ಷದಿಂದ ಕಾನೂನು ನೆರವು ವಿಷಯ ಚರ್ಚೆಯಾಗಲಿದೆ ಎಂದು ತಿಳಿದಿದೆ.
ಕಾಂಗ್ರೆಸ್ ಸರ್ಕಾರದ ಮತಬ್ಯಾಂಕ್, ಓಲೈಕೆ ರಾಜಕಾರಣ, ಒಮ್ಮುಖದ ಕ್ರಮಗಳ ವಿರುದ್ಧ ಪಕ್ಷ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು ಸಮನ್ವಯ ಸಾಧಿಸಿ ಹೋರಾಟ ನಡೆಸುವ ಬಗ್ಗೆ ಪ್ರಸ್ತಾಪವಾಗಲಿದೆ ಎಂದು ಮೂಲಗಳು ಹೇಳಿವೆ.
ಗಣತಿ ಜಾಗೃತಿ ತಯಾರಿ ಪರಾಮರ್ಶೆ: ಕೇಂದ್ರ ಸರ್ಕಾರ ತೆಗೆದುಕೊಂಡ ಹಲವು ನಿರ್ಣಯಗಳ ವಿಚಾರ ವಿನಿಮಯವಾಗಲಿದೆ. ಈ ಪೈಕಿ ಜನಗಣತಿ ಜತೆಗೆ ಜಾತಿ ಗಣತಿ ಮುಖ್ಯಾಂಶವಾಗಿರಲಿದೆ. 1931ರ ನಂತರ ನಡೆಯುತ್ತಿರುವ ಅತ್ಯಂತ ಪ್ರಮುಖ ಗಣತಿ ಪ್ರಕ್ರಿಯೆಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಯಶಸ್ವಿಗೊಳಿಸಲು ಮಾಡಿಕೊಂಡ ಸಿದ್ಧತೆಗಳು ಪರಾಮರ್ಶೆಯಾಗಲಿವೆ. ಜಾತಿ ಗಣತಿಗೆ ಶೈಕ್ಷಣಿಕ, ಸಾಮಾಜಿಕ ಜತೆಗೆ ಸಾಂಸ್ಕೃತಿಕ ಅಂಶಗಳನ್ನು 32 ಮಾನದಂಡಗಳನ್ನು ಅನುಸರಿಸುವ ಸಂಭವವಿದೆ. ಕೇಂದ್ರ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಸಂವಿಧಾನಾತ್ಮಕವಾದ ಅಧಿಕಾರವಿದೆ ಎಂಬುದನ್ನು ಜನರಿಗೆ ಮನಗಾಣಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ತಜ್ಞರು, ಚಿಂತಕರು ಜತೆಗೆ ದುಂಡು ಮೇಜಿನ ಸಭೆಯಾಗಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಸಭೆ ನಡೆಸಲಾಗಿದೆ. ಮೊದಲಿಗೆ ಪಕ್ಷದ ಕಾರ್ಯಕರ್ತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಜು.1ರಿಂದ ಆ.15ರವರೆಗೆ ವಿಭಾಗ, ಜಿಲ್ಲಾಮಟ್ಟದಲ್ಲಿ ಸಭೆಗಳ ಆಯೋಜನೆಗೆ ಸಿದ್ಧತೆಗಳಾಗಿರುವುದನ್ನು ಬಿಜೆಪಿ ನಾಯಕರು ವಿವರಿಸಲಿದ್ದಾರೆ. ಜಾಗೃತಿ ಸಭೆಗಳ ಮುಖೇನ ರಾಜ್ಯ ಸರ್ಕಾರದಿಂದ ಹೊಸದಾಗಿ ಜಾತಿ ಗಣತಿ ಬೇಡವೆಂಬ ಒತ್ತಡ ಹೇರುವುದು, ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಹೇಗೆಲ್ಲ ವಂಚಿಸಿದೆ ಎಂಬ ಮಾಹಿತಿ ಹಂಚಿಕೆ, ಎಚ್.ಕಾಂತರಾಜು ವರದಿ ಬಹಿರಂಗಕ್ಕೆ ಆಗ್ರಹಿಸುವ ಕಾರ್ಯತಂತ್ರ ಹೆಣೆದಿರುವುದನ್ನು ಜಂಟಿ ಸಭೆಗೆ ವಿವರಿಸಲಿದ್ದಾರೆ ಎಂದು ಗೊತ್ತಾಗಿದೆ.
ಸಂಘದ ಸಹಕಾರ್ಯವಾಹ ಸಿ.ಆರ್.ಮುಕುಂದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಶಾಸಕರಾದ ವಿ.ಸುನಿಲ್ ಕುಮಾರ್, ಎನ್.ರವಿಕುಮಾರ್, ಸಿ.ಟಿ.ರವಿ ಸೇರಿ 15 ಜನ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ತಿಳಿದಿದೆ.
ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರ ಬದಲಾವಣೆ, ರಾಜ್ಯಾಧ್ಯಕ್ಷರ ಬಗ್ಗೆ ಅಪಸ್ವರ ಎಂಬಿತ್ಯಾದಿ ಊಹಾಪೋಹಕ್ಕೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೆರೆ ಎಳೆದಿದ್ದು, ಗೊಂದಲ, ಬದಲಾವಣೆ ಚರ್ಚೆ ಕೇವಲ ಕಾಲ್ಪನಿಕ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ- ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು, ಮುಖಂಡರಲ್ಲೂ ಇದೆ. ಹಾಗಾಗಿ ಒಳ್ಳೆಯದಾಗಲಿದೆ ಎಂದು ನಗುತ್ತ ಉತ್ತರಿಸಿದರು. ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಸತ್ಯವಲ್ಲ. ಈಗ ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೊಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೊಷಣೆ ಆಗಲಿದೆ. ಕರ್ನಾಟಕ ಮಾತ್ರವಲ್ಲ ಉತ್ತರ ಪ್ರದೇಶ, ತೆಲಂಗಾಣ- ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ. ಹೀಗಾಗಿ ಡಿ.ವಿ.ಸದಾನಂದಗೌಡರ ಹೇಳಿಕೆ ಅರ್ಧ ಸತ್ಯ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಡಿ.ವಿ.ಸದಾನಂದಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಶುಕ್ರವಾರ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡುತ್ತೇನೆ. ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು. ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸ ಇರುವುದು ಸಹಜ. ದೆಹಲಿಗೆ ನಾನು ವೈಯಕ್ತಿಕ ಕಾರಣಕ್ಕಾಗಿ ಹೋಗಿದ್ದೆ. ರಾಷ್ಟ್ರೀಯ ನಾಯಕರನ್ನಾಗಲೀ, ಯಾರನ್ನೂ ಭೇಟಿ ಮಾಡಿಲ್ಲ ಎಂದರು. ಆರ್.ಅಶೋಕ್ ಭೇಟಿ ಕುರಿತು ಕೇಳಿದಾಗ, ಅವರು ವಿಪಕ್ಷ ನಾಯಕರಿದ್ದಾರೆ. ವಿಪಕ್ಷ ನಾಯಕರು ದೆಹಲಿಗೆ ಹೋಗಬಾರದು, ನಮ್ಮ ಮುಖಂಡರನ್ನು ಭೇಟಿ ಮಾಡಬಾರದು ಎಂದರೆ.. ಎಂದು ಮರುಪ್ರಶ್ನೆ ಹಾಕಿದರು.
ಗೊಡ್ಡು ಬೆದರಿಕೆಗೆ ಹೆದರಲ್ಲ: ತುರ್ತು ಪರಿಸ್ಥಿತಿ ಸಂಬಂಧ ಇಂದಿರಾ ಗಾಂಧಿಯವರನ್ನು ಕರಾಳವಾಗಿ ತೋರಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಬಿ.ವೈ.ವಿಜಯೇಂದ್ರ, ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳುವ ದಿನ. ಇಂದಿರಾ ಗಾಂಧಿ ಅವರ ನಡವಳಿಕೆ ಹಿಟ್ಲರ್ನಂತೆ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ ಎಂದರು. ನಮ್ಮ ಸಾಮಾಜಿಕ ಜಾಲತಾಣದ ಮೇಲಿನ ಎಫ್ಐಆರ್ ಹಾಕುವುದು, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.
ಆರ್.ಅಶೋಕ್ ವಿಪಕ್ಷ ನಾಯಕರಾಗಿ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ಆದರೆ, ಮಾಧ್ಯಮದಲ್ಲಿ ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಚಿಂತನೆ ನಡೆದಿದೆ ಎಂಬ ಚರ್ಚೆ ಆಗುತ್ತಿದೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ವಿಜಯೇಂದ್ರ ಹೇಳಿದರು.