ಟಾಪ್​ ನಟಿಯರ ಲಿಸ್ಟ್​ನಲ್ಲಿಲ್ಲ ತ್ರಿಪ್ತಿ! ನಿರ್ಮಾಪಕರಿಗೆ ಕೋಟಿ ಕೋಟಿ ರೂ. ಉಳಿಸಿಕೊಟ್ಟ 'ಸ್ಪಿರಿಟ್'​ ನಿರ್ದೇಶಕ | Prabhas Spirit

ವಿಜಯವಾಣಿ - 2025-05-26T201031.360
Published on

Prabhas Spirit: ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ರಭಾಸ್ ಅಭಿನಯಿಸುತ್ತಿರುವ ‘ಸ್ಪಿರಿಟ್’​ ಚಿತ್ರದಿಂದ ನಟಿ ದೀಪಿಕಾ ಪಡುಕೋಣೆ ಹೊರನಡೆದಿದ್ದೇ ತಡ ಇದೀಗ ಅವರ ಸ್ಥಾನಕ್ಕೆ ಬಾಲಿವುಡ್​ ಬೆಡಗಿ ತ್ರಿಪ್ತಿ ದಿಮ್ರಿ ಆಯ್ಕೆಯಾಗಿದ್ದಾರೆ. ಬಿಗ್​ ಪ್ರಾಜೆಕ್ಟ್​ನಿಂದ ಸ್ಟಾರ್​ ನಟಿ ಹೊರನಡೆಯುತ್ತಿದ್ದಂತೆ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ಟಾರ್​ ಹೀರೋಯಿನ್​ ಬರಲಿದ್ದಾರೆ ಎಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿಬಂದಿತ್ತು. ಆದ್ರೆ, ಸಿನಿಪ್ರಿಯರ ನಿರೀಕ್ಷೆಗಳೆಲ್ಲವೂ ಸದ್ಯ ತಲೆಕಳೆಗಾಗಿದೆ.

ನಿರ್ಮಾಪಕರ ಜೇಬು ಗಟ್ಟಿ

ದುಬಾರಿ ಮೊತ್ತದ ಸಂಭಾವನೆ, ದಿನಕ್ಕೆ 6 ಗಂಟೆಗಳ ಚಿತ್ರೀಕರಣ ಸಮಯ ಮತ್ತು ಚಿತ್ರ ತೆರೆಕಂಡ ಬಳಿಕ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ದೀಪಿಕಾ ಎಕ್ಸಿಟ್​ ಆದ ಬೆನ್ನಲ್ಲೇ ನಿರ್ದೇಶಕರಿಗೆ ಪ್ರಭಾಸ್​ ಎದುರು ಅಭಿನಯಿಸುವ ನಾಯಕಿ ಸ್ಥಾನಕ್ಕೆ ಯಾರನ್ನು ಕರೆತರಬೇಕು ಎಂಬ ಗೊಂದಲ ಶುರುವಾಗಿತ್ತು. ಈ ವಿಚಾರ ಸಿನಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಬಾಲಿವುಡ್​ ನಟಿ ಶ್ರದ್ಧಾ ಕಪೂರ್​, ತೆಲುಗು ನಟಿ ಮೃಣಾಲ್ ಠಾಕೂರ್​ ಮತ್ತು ಕನ್ನಡದ ಬೆಡಗಿ ರುಕ್ಮಿಣಿ ವಸಂತ್​ ಹೆಸರು ಮುನ್ನೆಲೆಗೆ ಬಂದಿತು. ಬಹುಬೇಡಿಕೆ ನಟಿಯರ ಹೆಸರನ್ನು ಬದಿಗಿಟ್ಟ ಸಂದೀಪ್​, ತಮ್ಮದೇ ನಿರ್ಧಾರ ಮೂಲಕ ಕಡೆಗೂ ನಿರ್ಮಾಪಕರ ಜೇಬು ಗಟ್ಟಿ ಮಾಡಿದ್ದಾರೆ.

ಸ್ಟಾರ್ ನಟಿಮಣಿಯರ ಸಾಲಿನಲ್ಲಿ ಇಲ್ಲದ ಯುವನಟಿ ತ್ರಿಪ್ತಿ ದಿಮ್ರಿಗೆ ಬಹುನಿರೀಕ್ಷಿತ ಸ್ಪಿರಿಟ್​ನಲ್ಲಿ ಸಂದೀಪ್​ ಅವಕಾಶ ಕೊಟ್ಟಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ಈ ಕುರಿತು ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕಿದ್ದಾರೆ. ಪ್ರಭಾಸ್​ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ತ್ರಿಪ್ತಿ ಆಯ್ಕೆ ಹಲವರಿಗೆ ತೃಪ್ತಿ ತಂದಿಲ್ಲ. ಆದರೆ, ಇಲ್ಲಿ ಸಂದೀಪ್​ ರೆಡ್ಡಿ, ಟಾಪ್​ ನಟಿಯರನ್ನು ಆಯ್ಕೆ ಮಾಡಿದರೆ, ಹಲವು ಷರತ್ತು ಮತ್ತು ಬೇಡಿಕೆಗಳನ್ನು ಮುಂದಿಡುತ್ತಾರೆ. ಇವರ ಬದಲಿಗೆ ಯುವನಟಿಗೆ ಅವಕಾಶ ಕೊಟ್ಟರೆ, ಚಿತ್ರದ ಬಜೆಟ್​ ಗಾತ್ರ ಹಾಗೂ ಷರತ್ತುಗಳ ರಿಸ್ಕ್​ ಕೂಡ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸ್ಪಷ್ಟ. ​

ಪ್ರಭಾಸ್​ ಸ್ಪಿರಿಟ್​ ಚಿತ್ರದಲ್ಲಿ ನಟಿಸಲು ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಡಿಮಾಂಡ್​ ಇಟ್ಟಿದ್ದ ದೀಪಿಕಾ ಪಡುಕೋಣೆ, ಹಲವು ಷರತ್ತುಗಳನ್ನು ಮುಂದಿಟ್ಟಿದ್ದರು. ಸ್ಟಾರ್​ ನಟಿಯ ನಡೆಯಿಂದ ಬೇಸರಗೊಂಡಿದ್ದ ಸಂದೀಪ್​, ಕೇವಲ 4 ಕೋಟಿ ರೂ.ಗೆ ಅವರ ಸ್ಥಾನಕ್ಕೆ ತ್ರಿಪ್ತಿಯನ್ನು ಕರೆತಂದಿರುವುದು ಸದ್ಯ ನಿರ್ಮಾಪಕರಿಗೆ ಒಳಿತನ್ನೇ ಮಾಡಿದೆ. ಈ ವಿಷಯ ಬಾಲಿವುಡ್​ ಮತ್ತು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net