ಕ್ಷಮೆಗೆ ಪಟ್ಟು: ಸಾಹಸಸಿಂಹನ ಪರ ನಿಂತ ಸ್ಯಾಂಡಲ್​ವುಡ್​

Ullasa
Published on

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟನ ವಿರುದ್ಧ ಸ್ಯಾಂಡಲ್​ವುಡ್ ತಿರುಗಿ ಬಿದ್ದಿದೆ. ಈ ನಡುವೆ ವಿಜಯ ರಂಗರಾಜು ತಮ್ಮ ಹೇಳಿಕೆ ಹಿಂಪಡೆಯುವಂತೆ ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ ಶುಕ್ರವಾರವಷ್ಟೇ ಎಚ್ಚರಿಕೆ ನೀಡಿದ್ದರು. ಇದೀಗ ಕನ್ನಡದ ಸ್ಟಾರ್ ನಟರು, ಆ ನಟನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿದ್ದಾರೆ. ಜಗ್ಗೇಶ್, ಸುದೀಪ್, ಪುನೀತ್ ರಾಜಕುಮಾರ್, ಗಣೇಶ್ ಸೇರಿ ಹಲವು ಘಟಾನುಘಟಿ ಕಲಾವಿದರು ತೆಲುಗು ನಟನಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸುದೀಪ್, ‘ವಿಷ್ಣು ಅವರು ಇಲ್ಲ ಎಂದ ಮಾತ್ರಕ್ಕೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೆ ಗಂಡಸುತನ ಇರುತ್ತಿತ್ತು. ಸಿನಿಮಾ ಕ್ಷೇತ್ರ ಅಂದರೆ ಒಂದು ಕುಟುಂಬದ ರೀತಿ. ನಿಮ್ಮ ಈ ಮಾತನ್ನು ನಿಮ್ಮ ಚಿತ್ರರಂಗದಲ್ಲೇ ಯಾರೂ ಒಪು್ಪವುದಿಲ್ಲ. ನಾಡಿನ ಜನರ ಆರಾಧ್ಯದೈವವಾಗಿರುವ ವಿಷ್ಣುವರ್ಧನ್ ನಮ್ಮ ನಡುವೆ ಇಲ್ಲದೆ ಇರಬಹುದು. ಕೋಟಿಕೋಟಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಇಲ್ಲಿ ಯಾರೂ ಸುಮ್ಮನೆ ಕುಳಿತಿಲ್ಲ’ ಎಂದು ಎಚ್ಚರಿಸಿದ್ದಾರೆ.

ಅದೇ ರೀತಿ ಪುನೀತ್ ರಾಜಕುಮಾರ್ ಸಹ ಪ್ರತಿಕ್ರಿಯಿಸಿದ್ದು, ‘ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನು ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ’ ಎಂದಿದ್ದಾರೆ.
‘ವಿಜಯ್ ರಂಗರಾಜು, ಈತ ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ. ನತದೃಷ್ಟ ಶಿಖಾಮಣಿ. ಎಲ್ಲಿಯೂ ಸಲ್ಲದವ. ಅದರಲ್ಲೂ ಈತ ಕಲಾವಿದನಂತೆ. ಈ ಮುಖ ಯಾವ ಚಿತ್ರದಲ್ಲೂ ನೋಡಿದ ನೆನಪಿಲ್ಲ! ಇವನ ಉದ್ಧಟತನದ ಮಾತಿಗೆ ಕ್ಷಮೆಯಿಲ್ಲ. ಸತ್ತವರು ದೇವರ ಸಮ’ ಎಂದು ಜಗ್ಗೇಶ್ ತರಾಟೆ ತೆಗೆದುಕೊಂಡರೆ, ನಟ ಗಣೇಶ್ ಸಹ ಮಾತನಾಡಿದ್ದಾರೆ.
‘ಕನ್ನಡದ ಮೇರು ನಟರಾದ ನಮ್ಮ ವಿಷ್ಣು ದಾದಾ ಬಗ್ಗೆ ಈ ರೀತಿ ಮಾತನಾಡುವುದು ಅತ್ಯಂತ ಅಕ್ಷಮ್ಯ ಹಾಗೂ ನಾನಿದನ್ನು ಖಂಡಿಸುತ್ತೇನೆ. ಕಲೆ ಮತ್ತು ಕಲಾವಿದನಿಗೆ ಗಡಿರೇಖೆಗಳಿಲ್ಲ. ಯಾವುದೇ ಸಿನಿಮಾರಂಗಕ್ಕೆ ಸಂಬಂಧಿಸಿದ ಕಲಾವಿದನಾದರೂ, ಮತ್ತೊಂದು ಸಿನಿಮಾರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ, ಗೌರವ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಬೇಕು. ಅದನ್ನು ವಿಷ್ಣುದಾದಾ ಹಿಂದಿನಿಂದ ಪಾಲಿಸುತ್ತ ಬಂದಿದ್ದಾರೆ. ಈ ನಿಮ್ಮ ಕೀಳು ಹೇಳಿಕೆಯಿಂದ ಅವರನ್ನು ಪೂಜಿಸುವ ಅಭಿಮಾನಿ ಮನಸ್ಸುಗಳಿಗೆ ನೋವಾಗಿದೆ. ಕೂಡಲೇ ಕ್ಷಮೆ ಯಾಚಿಸಿ’ ಎಂದು ಬರೆದುಕೊಂಡಿದ್ದಾರೆ ಗಣೇಶ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net