ಬೆಂಗಳೂರು: ಮೊದಲು ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಬಳಿಕ ಟಾಲಿವುಡ್ ಸೇರಿ ಪರಭಾಷೆಗೆ ಎಂಟ್ರಿ ಪಡೆದ ಕನ್ನಡದ ನಟಿಯರ ಪಟ್ಟಿಯೇ ಇದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಸಪ್ತಮಿಗೌಡ.... ಹೀಗೆ ಹಲವರಿದ್ದಾರೆ. ಇದೀಗ ಈ ಸಾಲಿಗೆ ಸ್ಯಾಂಡಲ್‌ವುಡ್ ಯುವ ನಟಿ ಹೃತಿಕಾ ಶ್ರೀನಿವಾಸ್ ಸೇರುತ್ತಿದ್ದಾರೆ. ಕನ್ನಡದ ‘ಆರಾಮ್ ಅರವಿಂದ ಸ್ವಾಮಿ’, ‘ಉಡಾಳ’, ‘ಔಟ್ ಆ್ ಸಿಲೆಬಸ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಹೃತಿಕಾ ಶ್ರೀನಿವಾಸ್ ಇದೀಗ ಟಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ಜು.17ರಂದು ನಟಿಯ ತೆಲುಗಿನ ‘ವದಲಾ’ ತೆರೆಕಂಡ ಬೆನ್ನಲ್ಲೇ ಶ್ರೀರಾಮ್ ಅಭಿನಯದ ‘ದ ಮೇಜ್’ ಎಂಬ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇದು ಹೃತಿಕಾ ಅಭಿನಯದ ತೆಲುಗಿನ ನಾಲ್ಕನೇ ಸಿನಿಮಾ. ಟಾಲಿವುಡ್ ಅನುಭವ ಹಾಗೂ ಸಿನಿ ಜರ್ನಿ ಕುರಿತು ಮಾತಿಗಿಳಿದ ಅವರು, ‘ಕನ್ನಡದ ಜತೆ ಜತೆಗೆ ತೆಲುಗಿನಲ್ಲಿ ಹೆಜ್ಜೆ ಹಾಕುತ್ತಿದ್ದೇನೆ. ‘ವದಲಾ’ ರಿಲೀಸ್ ಬೆನ್ನಲ್ಲೇ ಇದೀಗ ಸೈಕಲಾಜಿಕಲ್ ಥ್ರಿಲ್ಲರ್ ‘ದ ಮೇಜ್’ ಘೋಷಣೆಯಾಗಿದೆ. ಆಡಿಷನ್ಸ್‌ಗೆ ವಿಡಿಯೋವೊಂದು ಕಳುಹಿಸಿದ್ದೆ. ಅದನ್ನು ನೋಡಿ, ಚಿತ್ರತಂಡ ನನ್ನನ್ನು ಆಯ್ಕೆ ಮಾಡಿದೆ. ಸ್ಕ್ರಿಪ್ಟ್ ನೀಡಿ ಸಿನಿಮಾದಲ್ಲಿರುವ ಎರಡು ಪಾತ್ರಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಳ್ಳಿ ಎಂದು ನನಗೆ ಆಯ್ಕೆಗೆ ಬಿಟ್ಟಿದ್ದರು. ಸ್ಕ್ರಿಪ್ಟ್ ಓದಿದ ಮೇಲೆ ‘ಈಶಾ’ ಪಾತ್ರಕ್ಕೆ ಹೆಚ್ಚು ಒತ್ತು ಇರುವುದು ಗಮನಿಸಿ, ಅದನ್ನೇ ಆಯ್ಕೆ ಮಾಡಿಕೊಂಡೆ. ಪ್ರಮುಖ ಪಾತ್ರವಾಗಿದ್ದು, ಎರಡು ಶೇಡ್‌ಗಳಿವೆ. ಮೊದಲರ್ಧ ಒಂದು ರೀತಿಯಿದ್ದರೆ, ದ್ವಿತೀಯಾರ್ಧ ಬೇರೆ ಲೆವೆಲ್. ಅಷ್ಟು ಬುದ್ಧಿವಂತ ಪಾತ್ರ ಎನ್ನಬಹುದು. ಈಗಾಗಲೇ ಶೂಟಿಂಗ್ ಮುಗಿಸಿ, ರಿಲೀಸ್‌ಗೆ ಎದುರು ನೋಡುತ್ತಿದ್ದೇನೆ. ನನಗೆ ತೆಲುಗು ಓದಲು, ಮಾತನಾಡಲು ಬರುವ ಕಾರಣ ನಾನೇ ಡಬ್ಬಿಂಗ್ ಮಾಡಿದ್ದೇನೆ. ಸ್ಕೋಪ್ ಇರುವ ಪಾತ್ರವಾದ ಕಾರಣ ಈ ಚಿತ್ರದ ಬಳಿಕ ಅವಕಾಶಗಳು ಹೆಚ್ಚಲಿವೆ ಎಂಬ ನಿರೀಕ್ಷೆಯಿದೆ’ ಎಂದು ಹೃತಿಕಾ ಭರವಸೆವ್ಯಕ್ತಪಡಿಸುತ್ತಾರೆ.