VIDEO| ಸೂರಿ ಅಣ್ಣನ ಮೆಚ್ಚಿದ ಶಿವಣ್ಣ : ‘ಸಲಗ’ ಚಿತ್ರದ ಸಾಂಗ್ ರಿಲೀಸ್

Salaga 10 JAN 20
Published on

‘ಚರಣ್ ರಾಜ್ ಮ್ಯೂಸಿಕ್​ಗೆ ನಾನು ಅಭಿಮಾನಿ. ಅವರು ದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್. ಕನ್ನಡದ ಚಿತ್ರಗೀತೆಗಳು ಈಗ ಎಲ್ಲ ಕಡೆಯೂ ಕೇಳಿಸುತ್ತವೆ. ಅದೊಂಥರ ಮ್ಯಾಜಿಕ್, ಅಂಥ ಸಂಗೀತ ನಿರ್ದೇಶಕರು ನಮ್ಮಲ್ಲಿದ್ದಾರೆ’ ಎನ್ನುತ್ತ ನಟ ಶಿವರಾಜ್ ಕುಮಾರ್ ‘ಸಲಗ’ ಚಿತ್ರದ ಸಂಗೀತಕ್ಕೆ ಮೆಚ್ಚುಗೆ ಸೂಚಿಸಿದರು.

ಕೆ.ಪಿ. ಶ್ರೀಕಾಂತ್ ನಿರ್ವಣ, ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ‘ಸಲಗ’ ಚಿತ್ರದ ‘ಸೂರಿ ಅಣ್ಣ’ ಹಾಡು ಇತ್ತೀಚೆಗೆ ಬಿಡುಗಡೆ ಆಯಿತು. ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಿವರಾಜ್ ಕುಮಾರ್, ‘ಟಗರು ಬಂತು ಟಗರು ಹಾಡಿರುವ ಆಂಟನಿ ದಾಸ್ ಅವರೇ ಈ ಗೀತೆಯನ್ನು ಹಾಡಿದ್ದಾರೆ. ಅವರ ಧ್ವನಿಯಲ್ಲಿ ಒಂದು ಮ್ಯಾಜಿಕ್ ಇದೆ. ಸದ್ಯ ಒಂದು ಗೀತೆ ಬಿಡುಗಡೆ ಆಗಿದೆ. ಇನ್ನೂ ನಾಲ್ಕು ಗೀತೆ ರಿಲೀಸ್ ಆಗುವುದಿದೆ’ ಎಂದರು.

ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಧನಂಜಯ ಹಾಗೂ ವಸಿಷ್ಠ ಸಿಂಹ ಅವರನ್ನು ಫೈನೆಸ್ಟ್ ಆಕ್ಟರ್ಸ್ ಎಂದು ಮೆಚ್ಚುಗೆ ಸೂಚಿಸಿದರು. ‘ನಿರ್ವಪಕ ಕೆ.ಪಿ.ಶ್ರೀಕಾಂತ್ ನನಗೆ ಇಪ್ಪತ್ತು ವರ್ಷಗಳ ಸ್ನೇಹಿತ. ಅವರೀಗ ನಮ್ಮ ಕುಟುಂಬ ಸದಸ್ಯರಂತೆಯೇ ಆಗಿಹೋಗಿದ್ದಾರೆ’ ಎಂದರು.

‘ಇವತ್ತು ನನಗೆ ನಿಜಕ್ಕೂ ಭಯ ಆಗುತ್ತಿದೆ. ಸಿನಿಮಾ ಎಲ್ಲ ಮುಗಿದ ಮೇಲೇ ನಾನು ಆ ಬಗ್ಗೆ ಮಾತನಾಡುತ್ತೇನೆ’ ಎಂದ ನಿರ್ದೇಶಕ ದುನಿಯಾ ವಿಜಯ್, ಸದಾ ಜತೆಗಿದ್ದು ಬೆಂಬಲಿಸುವ ಶಿವಣ್ಣ ಅವರ ಸಹಾಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ತಾವು ಚಿತ್ರರಂಗಕ್ಕೆ ಪ್ರವೇಶಿಸಿದಾಗ ಹೊಸಬನಾಗಿಯೇ ಇದ್ದಿದ್ದರಿಂದ ಇಂದು ಅನೇಕ ಹೊಸಬರಿಗೆ ಅವಕಾಶ ಕೊಟ್ಟಿದ್ದಾಗಿ ಹೇಳಿದರು.

‘ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸುವ ಪಾತ್ರ ಮಾಡಿದ್ದೇನೆ. ಸಿನಿಮಾ ಬಿಡುಗಡೆ ಆದಮೇಲೆ ಇಲಾಖೆಯ ಹಲವರು ಮೆಚ್ಚುಗೆ ಸೂಚಿಸುತ್ತಾರೆ ಎಂಬ ಭರವಸೆ ಇದೆ. ವಿಜಿ ಅವರು ಅಷ್ಟು ಚೆನ್ನಾಗಿ ಪಾತ್ರವನ್ನು ರೂಪಿಸಿದ್ದಾರೆ’ ಎಂದರು ಖಡಕ್ ಪೊಲೀಸ್ ಅಧಿಕಾರಿ ಆಗಿ ಅಭಿನಯಿಸಿರುವ ಧನಂಜಯ್.

‘ಈ ಚಿತ್ರದಲ್ಲಿ ನನ್ನ ಇಂಟ್ರೊಡಕ್ಷನ್ ಸೀನ್​ನ ಶೂಟಿಂಗ್ ನಡೆದಿದ್ದೇ ಶಿವರಾಜ್​ಕುಮಾರ್ ಅವರ ಮುಂದೆ. ಮೊದಲ ದಿನದಿಂದಲೂ ಅವರು ಬೆಂಬಲವಾಗಿ ನಿಂತಿದ್ದಾರೆ’ ಎಂದರು ನಾಯಕಿ ಸಂಜನಾ ಆನಂದ್.

ನಿರ್ದೇಶಕರಾದ ತರುಣ್ ಸುಧೀರ್, ಪವನ್ ಒಡೆಯರ್, ಚೇತನ್ ಕುಮಾರ್, ಎ.ಪಿ.ಅರ್ಜುನ್, ಮಹೇಶ್ ಮುಂತಾದವರು ‘ನಿರ್ದೇಶಕರ ಕುಟುಂಬಕ್ಕೆ ವಿಜಯ್ ಅವರಿಗೆ ಸ್ವಾಗತ’ ಎಂದು ಶುಭ ಕೋರಿದರು. ‘ಅಶ್ವಿನಿ ಪ್ರೊಡಕ್ಷನ್ಸ್’ನ ‘ಎ2 ಮ್ಯೂಸಿಕ್’ ಸಂಸ್ಥೆ ‘ಸಲಗ’ ಆಡಿಯೋ ರೈಟ್ಸ್ ಪಡೆದುಕೊಂಡಿದೆ.

ನಾನು ನಿರ್ದೇಶನಕ್ಕೆ ಬರುವುದಿಲ್ಲ. ದೇವರು ಎಲ್ಲಿಯವರೆಗೂ ಶಕ್ತಿ ಕೊಡುತ್ತಾನೋ ಅಲ್ಲಿಯವರೆಗೂ ಹೀಗೇ ಇರುತ್ತೇನೆ. ಡೋಂಟ್ ವರಿ, ಇನ್ನೂ ಇಪ್ಪತ್ತು ವರ್ಷ ಹೀಗೇ ಇರುತ್ತೇನೆ.

| ಶಿವರಾಜ್ ಕುಮಾರ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net