

ಬೆಂಗಳೂರು: ಕಿರುತೆರೆ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 6 ಸ್ಪರ್ಧಿ ಆಗಿದ್ದ ನಯನಾ ಪುಟ್ಟಸ್ವಾಮಿ ಕೆಲವು ರಿಯಾಲಿಟಿ ಶೋಗಳ ವಿಜೇತೆ ಆಗಿ ಪ್ರೇಕ್ಷಕರ ಮನೆ ಗೆದ್ದಿದ್ದಾರೆ. ನಯನಾ ಪುಟ್ಟಸ್ವಾಮಿ ಮದುವೆ ಬಳಿಕ ಅಮೆರಿಕಾದಲ್ಲಿ ಪತಿ ಮತ್ತು ಮಗನ ಜತೆಗೆ ನೆಲೆಸಿದ್ದಾರೆ. ನಟಿ ಇದೀಗ ಹೊಸ ಆರಂಭವೊಂದರ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ.
ಕೆಲವು ಸಿನಿಮಾ ಹಾಗೂ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದ ನಟಿ ಮದುವೆಯಾದ ನಂತರ ಚಿತ್ರರಂಗದಿಂದ ದೂರವಾಗಿದ್ದಾರೆ. ಇದೀಗ ನಟಿ ವಿದೇಶದಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?: ನನ್ನ ಜೀವನ ಇದೀಗ ಹೊಸ ತಿರುವುಗಳಿಗೆ ಹೊರಳುತ್ತಿದೆ. ಈ ಮೂಲಕ ನಾನು ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ. ಮಕ್ಕಳ ಮೇಲಿನ ನನ್ನ ಉತ್ಸಾಹ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಬೋಧನೆ ಮತ್ತು ನಿರಂತರ ಕಲಿಕೆಯಿಂದ ಅದೇ ನನಗೆ ಮಾರ್ಗದರ್ಶನ ನೀಡುತ್ತಿದೆ.ಇಂದಿನಿಂದ ನಾನು ಓರ್ವ ಶಿಕ್ಷಕಿಯಾಗಿ STEM ಶಾಲೆಯಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ಕಳೆದ ಮೂರು ತಿಂಗಳಲ್ಲಾದ ಬೆಳವಣಿಗೆ ಒಂದು ಹೊಸ ರೂಪಾಂತರಕ್ಕೆ ಕಾರಣವಾಗಿದೆ. ಶಿಕ್ಷಕಿ ವೃತ್ತಿ ನನಗೆ ನಿತ್ಯ ಹೊಸತನ್ನು ಕಲಿಸಿಕೊಡುತ್ತಿದೆ. ಇದೀಗ ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಶಾಲೆಯಲ್ಲಿ ನಾವು ಮಕ್ಕಳಿಗೆ ಕಲಿಸುವ ವಿಷಯಗಳಷ್ಟೇ ಅಲ್ಲದೆ, ಇಲ್ಲಿನ ನನ್ನ ಸಹೋದ್ಯೋಗಿಗಳು ಕುಟುಂಬದವರಂತೆ ಹತ್ತಿರವಾಗಿದ್ದಾರೆ. ಅವರೊಂದಿಗೆ ಇನ್ನಷ್ಟು ಮರೆಯಲಾಗದ ಕ್ಷಣಗಳನ್ನು ಅನುಭವಿಸಲು, ನಾನು ಉತ್ಸುಕಳಾಗಿದ್ದೇನೆ. ಇದೆಲ್ಲದಕ್ಕಿಂತ ಬಹು ಮುಖ್ಯವಾಗಿ, ಪ್ರತಿದಿನ ನನಗೆ ಸ್ಫೂರ್ತಿ ನೀಡುವ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ನಾನು ಎದುರು ನೋಡುತ್ತಿದ್ದೇನೆ. ನೆನಪಿರಲಿ, ಜ್ಞಾನವೇ ಶಕ್ತಿಯಿದ್ದಂತೆ. ಉಜ್ವಲ ಭವಿಷ್ಯಕ್ಕಾಗಿ ಈ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ನಾನು ನಿರ್ಧರಿಸಿದ್ದೇನೆ ಎಂದು ನಯನಾ ಬರೆದುಕೊಂಡಿದ್ದಾರೆ.
ಮದುವೆಗೂ ಮುನ್ನ ನಟನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದ ನಯನಾ ಇದೀಗ, ಅಮೆರಿಕದಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಆಗಿ ಕೆಲಸ ಆರಂಭಿಸಿದ್ದಾರೆ. ಪತಿ ಚರಣ್ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿ ಆಗಿದ್ದಾರೆ.