

ಬೆಂಗಳೂರು: ತುಂಬಾ ಖಿನ್ನತೆಯಿಂದ ಬಳಲುತ್ತಿರುವ ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಮತ್ತೊಮ್ಮೆ ಫೇಸ್ಬುಕ್ ಲೈವ್ನಲ್ಲಿ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ಸುದೀಪ್ ಸರ್ ಹತ್ರನೂ ನಾನು ಆರ್ಥಿಕ ಸಹಾಯವನ್ನು ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಕುಟುಂಬದ ಸಮಸ್ಯೆಯಾದರೆ, ನನಗೆ ತುಂಬಾ ಮೋಸ ಮಾಡಿದ್ದಾರೆ. ಅಲ್ಲದೆ, ಚಿಕ್ಕ ವಯಸ್ಸಲ್ಲಿ ನನಗೆ ಆಗಬಾರದ ಘಟನೆಯೆಲ್ಲ ನಡೆದಿದೆ. ನನ್ನ ಕೈಯಲ್ಲಿ ಅದ್ಯಾವುದನ್ನೂ ಮರೆಯಲು ಆಗುತ್ತಿಲ್ಲ. ಇದರ ನಡುವೆ ನಾನು ಫೇಸ್ಬುಕ್ನಲ್ಲಿ ಕಾಮೆಂಟ್ಸ್ ನೋಡುತ್ತಿದ್ದೇನೆ. ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ನಾನು ತುಂಬಾ ನೋವಿನಲ್ಲಿದ್ದೇನೆ. ನಾನು ನಿರೀಕ್ಷೆ ಮಾಡುತ್ತಿರುವುದೊಂದೆ ನನಗೆ ದಯಾಮರಣವನ್ನು ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ ಎಂದಿದ್ದಾರೆ.
ನಿನ್ನೆಯು ಸಹ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದ ಜಯಶ್ರೀ, ನನಗೆ ಬದುಕಲು ಇಷ್ಟವಿಲ್ಲ. ನಾನು ಸಾಯಬೇಕು ಎಂದಿದ್ದರು. ಲೈವ್ನಲ್ಲೂ ಅಭಿಮಾನಿಗಳು ಜಯಶ್ರೀ ಅವರಿಗೆ ಧೈರ್ಯದ ಮಾತುಗಳನ್ನಾಡಿದ್ದರು. ಎಲ್ಲವೂ ಸರಿಹೋಗಲಿದೆ. ನೀವು ಸಾಯುವ ಮಾತನ್ನು ಆಡಬೇಡಿ ಧೈರ್ಯವಾಗಿರಿ ಎಂದಿದ್ದರು. (ದಿಗ್ವಿಜಯ ನ್ಯೂಸ್)