ಬಹುನಿರೀಕ್ಷಿತ ಕೊರಗಜ್ಜ ಚಿತ್ರದ ಆಡಿಯೋ ರೈಟ್ಸ್ ಜೀ ಮ್ಯೂಸಿಕ್ ತೆಕ್ಕೆಗೆ
ಕನ್ನಡ ಚಿತ್ರರಂಗಕ್ಕೆ 2025 ಆಶಾದಾಯಕವಾಗಿತ್ತು. ಈ ವರ್ಷ ಕನ್ನಡದಲ್ಲಿ 250ಕ್ಕೂ ಅಧಿಕ ಚಿತ್ರಗಳು ರಿಲೀಸ್ ಆದವು. ‘ಕಾಂತಾರ ಅಧ್ಯಾಯ 1’ ಮತ್ತೊಮ್ಮೆ ಇಡೀ ವಿಶ್ವವನ್ನು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿತು. ‘ಸು ಫ್ರಮ್ ಸೋ’ ಗೆಲುವು ಸಣ್ಣ ಬಜೆಟ್ ಸಿನಿಮಾಗಳಿಗೆ ಚೈತನ್ಯ ತುಂಬಿತು. ಇದರ ಮಧ್ಯೆ, ಕನ್ನಡದ ಮೇರುನಟ ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಜಾಮೀನಿನಲ್ಲಿದ್ದ ನಟ ದರ್ಶನ್ ಮತ್ತೆ ಜೈಲು ಪಾಲಾಗುವ ಮೂಲಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಇವೆಲ್ಲದರ ಮಧ್ಯೆ ಈ ವರ್ಷ ಚಂದನವನದಲ್ಲಿ ಏನೆಲ್ಲಾ ಸಂಗತಿಗಳು ನಡೆದವು ಎಂಬುದರ ಸುತ್ತ ಸಂಕ್ಷಿಪ್ತ ನೋಟ ಇಲ್ಲಿದೆ.
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್
ಒಂದೆಡೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮವಾದ ಕಾರಣ ನೋವಿನಲ್ಲಿದ್ದ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಮಾಧಾನಪಡಿಸುವ ಯತ್ನ ಮಾಡಿತು. ನಟಿಯರಾದ ಜಯಮಾಲಾ, ತಾರಾ ಅನುರಾಧ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಡಾ.ವಿಷ್ಣುವರ್ಧನ್ ಜತೆಗೆ ಹಿರಿಯ ನಟಿ ಬಿ. ಸರೋಜಾದೇವಿಗೂ ‘ಮರಣೋತ್ತರ ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತು. ಇದು ವಿಷ್ಣು ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು.
ಕೊರಗಜ್ಜನ ಮೂಲಕ ಕನ್ನಡಕ್ಕೆ ಬಂದ ಜೀ ಮ್ಯೂಸಿಕ್
ಕನ್ನಡದ ಬಹುನಿರೀಕ್ಷಿತ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಚಿತ್ರದ ಮೂಲಕ ಪ್ರತಿಷ್ಠಿತ ಜೀ. ಮ್ಯೂಸಿಕ್.ಕಾಮ್ ಕಂಪನಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿತು. ಉತ್ತಮ ಬೆಲೆಗೆ ಕೊರಗಜ್ಜ ಚಿತ್ರದ ಆಡಿಯೋ ಹಕ್ಕುಗಳನ್ನು ಕಂಪನಿ ಖರೀದಿಸಿತು. ಜೀ ಮ್ಯೂಸಿಕ್ ಆಡಿಯೋ ಹಕ್ಕುಗಳನ್ನು ಖರೀದಿಸಿದ ಮೊದಲ ಕನ್ನಡ ಚಿತ್ರ ಇದಾಗಿದೆ. ಇನ್ನು ಚಿತ್ರದಲ್ಲಿ 30ಕ್ಕೂ ಸಾಂಗ್ ಗಳಿದ್ದು, ಈಗಾಗಲೇ ಗುಳಿಗಾ ಗುಳಿಗಾ ಹಾಡು ರಿಲೀಸ್ ವೈರಲ್ ಆಗಿದೆ. ಗಾಳಿ ಗಂಧ ಹಾಡು ಶೀಘ್ರದಲ್ಲಿ ಅನಾವರಣಗೊಳ್ಳಲಿದೆ.
ದಾಖಲೆ ಚಿತ್ರಗಳು ತೆರೆಗೆ
ಈ ವರ್ಷ ಥಿಯೇಟರ್‌ನಲ್ಲಿ 248 ಹಾಗೂ ಒಟಿಟಿಯಲ್ಲಿ 8 ಸೇರಿ 256 ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಪ್ರಾದೇಶಿಕ ಭಾಷೆಯ 11 ಹಾಗೂ ಬೇರೆ ಭಾಷೆಯಿಂದ ಡಬ್ ಆದ ಚಿತ್ರಗಳನ್ನು ಸೇರಿಸಿದರೆ ಈ ಸಂಖ್ಯೆ 280 ದಾಟುತ್ತದೆ. ಈ ಲೆಕ್ಕಾಚಾರ ನೋಡುವುದಾದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ವರ್ಷ ಅತಿ ಹೆಚ್ಚು ಸಿನಿಮಾ ರಿಲೀಸ್ ಆಗಿವೆ. ಆದರೂ, ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾಗಳ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟು.
ಚಿತ್ರರಂಗಕ್ಕೆ ಶ್ರಾವಣ ಶುಕ್ರದೆಸೆ
ಈ ವರ್ಷದ ಮೊದಲರ್ಧದಲ್ಲಿ ಶರಣ್ ನಟನೆಯ ‘ಛೂ ಮಂತರ್’, ನವೀನ್ ಶಂಕರ್ ಅಭಿನಯದ ‘ನೋಡಿದವರು ಏನಂತಾರೆ’, ಅಜೇಯ್ ರಾವ್ ನಟಿಸಿ, ನಿರ್ಮಿಸಿದ್ದ ‘ಯುದ್ಧಕಾಂಡ 2’, ‘ಮಾದೇವ’ ಸ್ವಲ್ಪಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡಿದ್ದವು. ದ್ವಿತೀಯಾರ್ಧದಲ್ಲಿ ಜುಲೈನಿಂದ ಕನ್ನಡ ಚಿತ್ರರಂಗಕ್ಕೆ ಶ್ರಾವಣ ಶುಕ್ರದೆಸೆ ಆರಂಭವಾಯಿತು. ಜು. 18ರಂದು ತೆರೆಕಂಡ ಯುವ ರಾಜಕುಮಾರ್ ನಟನೆಯ ‘ಎಕ್ಕ’ ಹಾಗೂ ಕಿರೀಟಿ ರೆಡ್ಡಿ ಡೆಬ್ಯೂ ಚಿತ್ರ ‘ಜೂನಿಯರ್’ ಉತ್ತಮ ಪ್ರದರ್ಶನ ಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದವು. ಬಳಿಕ ‘ಸು ಫ್ರಮ್ ಸೋ ದಾಖಲೆ ಬರೆಯಿತು.
ಸುಲೋಚನಾ ತಂದ ‘100 ಕೋಟಿ’ ನಗು
‘ಜೂನಿಯರ್’, ‘ಎಕ್ಕ’ ತೆರೆಕಂಡ ವಾರದ ಬಳಿಕ ರಿಲೀಸ್ ಆದ ಜೆ.ಪಿ.ತುಮಿನಾಡು ನಟಿಸಿ, ನಿರ್ದೇಶಿಸಿದ್ದ, ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಕನ್ನಡ ಪ್ರೇಕ್ಷಕರನ್ನು ನಗೆಗಡೆಲಲ್ಲಿ ತೇಲಿಸಿ 120 ಕೋಟಿ ಗಳಿಕೆ ಮಾಡಿತು. ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಆನ್‌ಲೈನ್ ಟಿಕೆಟ್ ಬುಕಿಂಗ್ ಮೂಲಕ ದಾಖಲೆ ಬರೆಯಿತು. ಕನ್ನಡದಲ್ಲಿ ಭರ್ಜರಿ ಸಕ್ಸಸ್ ಕಂಡ ಬಳಿಕ ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿಗೆ ಡಬ್ ಆಯಿತು. ಕೇವಲ 3.5 ಕೋಟಿ ರೂ. ಬಜೆಟ್‌ನ ಈ ಚಿತ್ರ 100 ಕೋಟಿ ಕ್ಲಬ್ ಸೇರಿ, ಎಲ್ಲರ ಹುಬ್ಬೇರಿಸಿತು.
‘ಕಾಂತಾರ’ಗೆ ಜಾಗತಿಕ ಗೆಲುವು
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ ಅಧ್ಯಾಯ 1’ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿತು. ಅ.2ರಂದು ರಿಲೀಸ್ ಆದ ಚಿತ್ರ ಹಲವು ದಾಖಲೆ ಬರೆಯಿತು. ರಿಲೀಸ್ ಆದ ಮೊದಲ ದಿನವೇ 57 ಕೋಟಿ ರೂ. ಕಲೆಕ್ಷನ್ ಮಾಡಿತು. ‘ಕಾಂತಾರ ಅಧ್ಯಾಯ 1’ ಒಟ್ಟು ಗಳಿಕೆ ₹823 ಕೋಟಿ ತಲುಪಿತು. ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡದ ಮೊದಲನೇ ಹಾಗೂ ಭಾರತದೆ ಎರಡನೇ ಸಿನಿಮಾ ಇದಾಯಿತು.
200 ರೂ. ಟಿಕೆಟ್ ನಿಗದಿಗೆ ತಡೆಯಾಜ್ಞೆ
ದುಬಾರಿ ಸಿನಿಮಾ ಟಿಕಟ್ ದರಕ್ಕೆ ಕಡಿವಾಣ ಹಾಕಿ, ಏಕರೂಪ ದರ ನಿಗದಿ ಮಾಡಬೇಕು ಎಂಬ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ, ‘ಕರ್ನಾಟಕ ಸಿನಿಮಾ, ನಿಯಂತ್ರಣ ಮತ್ತು ತಿದ್ದುಪಡಿ ನಿಯಮಗಳು-2025’ ಜಾರಿಗೆ ತಂದಿತ್ತು. ಇದರನ್ವಯ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರೂ. ಮೀರುವಂತಿಲ್ಲ ಎಂದು ಆದೇಶಿಸಿತ್ತು. ಆದರೆ, ಸರ್ಕಾರದ ಈ ಆದೇಶದ ವಿರುದ್ಧ ಹೊಂಬಾಳೆ ಫಿಲಂಸ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಇದರಿಂದಾಗಿ ಏಕರೂಪ ಟಿಕಟ್ ದರ ನಿಗದಿ ಜಾರಿಯಾದ ಕೆಲವೇ ದಿನಗಳಲ್ಲಿ ತಡೆಯಾಯಿತು.
ವಿಷ್ಣು ಸಮಾಧಿ ಧ್ವಂಸ
ಅಭಿಮಾನ್ ಸ್ಟುಡಿಯೋದಲ್ಲಿದ್ದ ಮೇರುನಟ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆಯಾಯಿತು. ಹೈಕೋರ್ಟ್ ಆದೇಶದ ಮೇರೆಗೆ ಆ. 8ರ ತಡರಾತ್ರಿ ಪೊಲೀಸ್ ಬಿಗಿಭದ್ರತೆಯಲ್ಲಿ ಸಮಾಧಿ ತೆರೆವುಗೊಳಿಸಲಾಗಿತ್ತು. ಈ ವಿಷಯ ತಿಳಿದ ಸಹಸ್ರಾರು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಬಳಿ ಜಮಾಯಿಸಿ, ಕರಾಳ ದಿನ ಆಚರಿಸಿದರು. ಪ್ರತಿಭಟನೆ ನಡೆಸಿ ತೆರವುಗೊಳಿಸಿದ ಸ್ಥಳದಲ್ಲಿಯೇ ವಿಷ್ಣು ಸ್ಮಾರಕ ಮರುನಿರ್ಮಿಸಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ಸ್ಯಾಂಡಲ್‌ವುಡ್ ನಟ-ನಟಿಯರು ಕೂಡ ಧ್ವನಿಗೂಡಿಸಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಇರದ ಕಾರಣ ವಿಷ್ಣುವರ್ಧನ್ ಅವರ 75ನೇ ಜಯಂತಿಯನ್ನು ಅಭಿಮಾನಿಗಳು ಮನೆ ಹಾಗೂ ಮನದಲ್ಲಿ ಆಚರಿಸಿದರು. ಮತ್ತೊಂದೆಡೆ ನಟ ಸುದೀಪ್ ಸಮಾನ ಮನಸ್ಕರೊಂದಿಗೆ ಸೇರಿ ಇನ್ನೊಂದು ಜಾಗದಲ್ಲಿ ತಾವೇ ಡಾ. ವಿಷ್ಣು ಸ್ಮಾರಕ ನಿರ್ಮಿಸಲು ಮುಂದಾಗಿದ್ದಾರೆ.
ಕ್ಯಾನ್ಸರ್ ಗೆದ್ದ ಶಿವಣ್ಣ
ನಟ ಶಿವರಾಜಕುಮಾರ್ ಕ್ಯಾನರ್‌ನಿಂದ ಬಳಲುತ್ತಿದ್ದ ಕಾರಣ ಕಳೆದ ಡಿಸೆಂಬರ್‌ನಲ್ಲಿ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಮಿಯಾಮಿ ಆಸ್ಪತ್ರೆಯಲ್ಲಿ ಶಸಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿಯಾಗಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡ ಶಿವಣ್ಣ ಜನವರಿಯಲ್ಲಿ ಸ್ವದೇಶಕ್ಕೆ ಮರಳಿದರು. ಒಂದೂವರೆ ತಿಂಗಳು ವಿಶ್ರಾಂತಿ ಪಡೆದು ಬಳಿಕ ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಪಾಲ್ಗೊಂಡರು.
ದರ್ಶನ್ ಬೇಲು ರದ್ದು ಮತ್ತೆ ಜೈಲು
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ಗೆ ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಿತ್ತು. ಆದರೆ, ಜಾಮೀನು ರದ್ದು ಮಾಡಬೇಕೆಂದು ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಸುದೀರ್ಘ ವಿಚಾರಣೆ ಬಳಿಕ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಅ.14ರಂದು ಸುಪ್ರೀಂಕೋರ್ಟ್ ರದ್ದುಪಡಿಸಿತು. ಇದರಿಂದಾಗಿ ದರ್ಶನ್ ಮತ್ತೆ ಜೈಲುಪಾಲಾದರು. ದರ್ಶನ್ ಅನುಪಸ್ಥಿತಿಯಲ್ಲಿ ಅವರ ನಟನೆಯ ‘ದ ಡೆವಿಲ್’ ಡಿ.11ರಂದು ತೆರೆಕಂಡಿತ್ತು. ಬಹುನಿರೀಕ್ಷೆಯ ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಎರಡು ಶೂನ್ಯವಾರ
ಈ ವರ್ಷದಲ್ಲಿ ಎರಡು ವಾರ ಕನ್ನಡದ ಯಾವುದೇ ಸಿನಿಮಾಗಳು ಬಿಡುಗಡೆಯಾಗದೆ ಚಿತ್ರರಂಗಕ್ಕೆ ಶೂನ್ಯವಾರವಾಯಿತು. ಅಕ್ಟೋಬರ್ 2ರಂದು ‘ಕಾಂತಾರ ಅಧ್ಯಾಯ 1’ ತೆರೆಗೆ ಬಂದ ಕಾರಣ ಅ.9ರ ಶುಕ್ರವಾರ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ. ಇನ್ನು ಡಿಸೆಂಬರ್ 11ರಂದು ದರ್ಶನ್ ನಟನೆಯ ‘ದ ಡೆವಿಲ್’ ರಿಲೀಸ್ ಆದ ಕಾರಣ ಡಿ. 18ರ ಶುಕ್ರವಾರ ಬೇರಾವ ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿಲ್ಲ.
‘ಮಾರ್ಕ್’, ‘45’ ಸಂಚಲನ
2025ರ ವರ್ಷಾಂತ್ಯ ‘45’ ಮತ್ತು ‘ಮಾರ್ಕ್’ ಸಿನಿಮಾಗಳು ಕ್ರೇಜ್ ಹೆಚ್ಚಿಸಿವೆ. ಒಂದೇ ದಿನ (ಡಿ.25) ಎರಡು ಬಹುಕೋಟಿ ವೆಚ್ಚದ ಬಹುತಾರಾಗಣದ ಚಿತ್ರಗಳು ರಿಲೀಸ್ ಆದರೂ, ಅಭೂತಪೂರ್ವ ಓಪನಿಂಗ್ ಪಡೆದವು. ‘45’ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ತೆರೆಮೇಲೆ ವಿಜೃಂಭಿಸಿದರು. ಹಾಗೆಯೇ, ‘ಮಾರ್ಕ್’ ಮೂಲಕ ಸುದೀಪ್ ಮಾಸ್ ಆಗಿ ಗರ್ಜಿಸಿದರು.
ಫ್ಯಾನ್ಸ್ಗಳ ಕಮೆಂಟ್ ವಾರ್ !
ನಟಿ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಕಮೆಂಟ್ ವಾರ್ ಈ ವರ್ಷದಲ್ಲಿ ಬಿಸಿ ಬಿಸಿ ಚರ್ಚೆಯಾಗಿತ್ತು. ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ವಿರುದ್ಧ ಮಾತನಾಡಿದ್ದಕ್ಕಾಗಿ ರಮ್ಯಾ ವಿರುದ್ಧ ನಟನ ಅಭಿಮಾನಿಗಳು ಅವಹೇಳನಕಾರಿಯಾಗಿ ನಿಂದಿಸಿದ್ದರು. ಅಂತಹ ಅಭಿಮಾನಿಗಳ ವಿರುದ್ಧ ಕಾನೂನು ಸಮರ ಸಾರಿದರು. ಮತ್ತೊಂದೆಡೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಜಾಲತಾಣದಲ್ಲಿ ನಿಂದಿಸಿದ್ದ 18 ಅಕೌಂಟ್‌ಗಳ ವಿರುದ್ಧ ದೂರು ನೀಡಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟವರು:
* ಡಾಲಿ ಧನಂಜಯ -ಧನ್ಯತಾ
* ಸೌಂದರ್ಯ ಜಯಮಾಲ- ರುಷಬ್
* ಅರ್ಚನಾ ಕೊಟ್ಟಿಗೆ -ಬಿ.ಆರ್.ಶರತ್
* ಭುವನ್ ಗೌಡ- ನಿಖಿತಾ
* ಕಿರಣ್ ರಾಜ್- ಅನಾಯಾ ವಸುಧಾ
* ರಾಣಾ-ರಕ್ಷಿತಾ
* ನಿರ್ದೇಶಕ ಮಹೇಶ್- ಚೈತ್ರಾ
* ಲೇಖಾ ಚಂದ್ರ- ಶ್ರೇಯಸ್
* ರಘು ದೀಕ್ಷಿತ್-ವಾರಿಜಾ ಶ್ರೀ
* ರಜಿನಿ- ಅರುಣ್
* ವೈಷ್ಣವಿ ಗೌಡ-ಅನ್ಕೂಲ್ ಮಿಶ್ರಾ
* ಅನುಶ್ರೀ-ರೋಷನ್
* ಶ್ರೀರಾಮ್ ಮಹಾದೇವ್- ಸ್ಫೂರ್ತಿ
ಗಮನ ಸೆಳೆದ ಹೊಸ ನಿರ್ದೇಶಕರು:
* ಜೆ.ಪಿ.ತುಮಿನಾಡು (ಸು ಫ್ರಮ್ ಸೋ)
* ಅರ್ಜುನ್ ಜನ್ಯ (45)
* ಪುನೀತ್ ರಂಗಸ್ವಾಮಿ (ಏಳುಮಲೆ)
* ಆಯುಷ್ ಮಲ್ಲಿ (ಪಪ್ಪಿ)
* ಭೀಮರಾವ್ ಪೈದೊಡ್ಡಿ- (ಹೆಬ್ಬುಲಿ ಕಟ್ )
* ಸಮರ್ಥ್ ಕಡಕೋಳ್ (ಎಡಗೈ ಅಪಘಾತಕ್ಕೆ ಕಾರಣ)
* ವಿನಾಯಕ (ಫುಲ್‌ಮೀಲ್ಸ್)
* ಪ್ರತಾಪ್ ಗಂಧರ್ವ (ಕಂಗ್ರಾಜ್ಯುಲೇಷನ್ ಬ್ರದರ್)
* ಚಂದನ್ ಕುಮಾರ್ (ಫ್ಲರ್ಟ್)
ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಚಿತ್ರಗಳು:
* ಕಾಂತಾರ ಅಧ್ಯಾಯ 1
*ಮಹಾವತಾರ್ ನರಸಿಂಹ
* ಸು ಫ್ರಮ್ ಸೋ
* ದ ಡೆವಿಲ್
* 45
* ಮಾರ್ಕ್
*ಬ್ರ್ಯಾಟ್
*ಮಾದೇವ
*ಛೂ ಮಂತರ್
* ಯುದ್ಧಕಾಂಡ 2
ಇಹಲೋಕ ತ್ಯಜಿಸಿದವರು:
ಹಿರಿಯ ನಟಿ ಬಿ. ಸರೋಜಾ ದೇವಿ, ನಟರಾದ ಎಂ.ಎಸ್.ಉಮೇಶ್, ರಾಜು ತಾಳಿಕೋಟೆ, ಬ್ಯಾಂಕ್ ಜನಾರ್ಧನ್, ರಾಕೇಶ್ ಪೂಜಾರಿ, ದಿನೇಶ್ ಮಂಗಳೂರು, ಹರೀಶ್ ರಾಯ್, ಸಂತೋಷ್ ಬಾಲರಾಜ್, ಗಡ್ಡಪ್ಪ, ಶ್ರೀಧರ್ ನಾಯಕ್.