ಡ್ಯಾಂಗಳಿಂದ ಮರಳೆತ್ತಲು ಪ್ಲಾನ್!

sand
sand
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಹೊಸ ಮರಳು ನೀತಿ 2020ರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಕಿಂಡಿ ಅಣೆಕಟ್ಟುಗಳಿಂದ ಮರಳು ತೆಗೆದು ಮಾರಾಟ ಮಾಡುವ ಸಕ್ಷಮ ಪ್ರಾಧಿಕಾರವಾಗಿ ಕರ್ನಾಟಕ ರಾಜ್ಯ ಖನಿಜ ನಿಗಮ ಹೊಣೆ ವಹಿಸಿಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ಈ ಭಾಗದ ಡ್ಯಾಂಗಳಿಂದ ಮರಳು ಡ್ರೆಜ್ಜಿಂಗ್ ಆರಂಭವಾಗಲಿದೆ.

ಇದರೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಾಗಲಿದೆ. ಈಗಾಗಲೇ ಈ ಕುರಿತ ಟೆಂಡರ್ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ದ.ಕ ಜಿಲ್ಲೆಯ ಎರಡು ಡ್ಯಾಂಗಳಲ್ಲಿ ಡ್ರೆಜ್ಜಿಂಗ್ ಕಾರ್ಯಾದೇಶ ನೀಡುವುದಷ್ಟೇ ಬಾಕಿ ಇದೆ.

ದ.ಕ ಹಾಗೂ ಉಡುಪಿ ಜಿಲ್ಲೆಯ ನಾಲ್ಕು ಡ್ಯಾಂಗಳನ್ನು ಮಾತ್ರ ಖನಿಜ ನಿಗಮ ವಹಿಸಿಕೊಂಡಿದ್ದು, ಎಲ್ಲ ಡ್ಯಾಂಗಳಲ್ಲೂ ತಲಾ 1 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯವಿರುವುದಾಗಿ ಅಂದಾಜಿಸಲಾಗಿದೆ. ನೂತನ ಮರಳು ನೀತಿಯನ್ವಯ ಮರಳು ಹಂಚಿಕೆಯನ್ನು ಆಯಾ ಜಿಲ್ಲಾ ಮರಳು ಕ್ರಿಯಾ ಸಮಿತಿಗಳು ಮಾಡಿಕೊಡುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಫಲ್ಗುಣಿ ನದಿಯ ಆದ್ಯಪಾಡಿ ಡ್ಯಾಂ ಹಾಗೂ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಶಂಭೂರು ಡ್ಯಾಂ, ಉಡುಪಿ ಜಿಲ್ಲೆಯ ಕುಂದಾಪುರದ ಸೌಪರ್ಣಿಕಾ ನದಿಯ ಬಂಟ್ವಾಡಿ ಡ್ಯಾಂ ಮತ್ತು ಚಕ್ರಾ ನದಿಯ ತೊಪ್ಲು ಡ್ಯಾಂಗಳಿಂದ ಮರಳೆತ್ತಲಾಗುವುದು. ಈ ಪೈಕಿ ಬಂಟ್ವಾಡಿ ಮತ್ತು ತೊಪ್ಲು ಡ್ಯಾಂಗಳ ಮರಳೆತ್ತಲು ಟೆಂಡರ್ ಆಹ್ವಾನಿಸಲಾಗಿದೆ. ಬಂಟ್ವಾಡಿ ಡ್ಯಾಂನ ಸೇನಾಪುರ, ಹೊಸಾಡು ಹಾಗೂ ತೊಪ್ಲು ಡ್ಯಾಂನ ಹಕ್ಲಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು ವ್ಯಾಪ್ತಿಯಲ್ಲಿ ಮರಳೆತ್ತಲು ಅವಕಾಶವಿದೆ. ಫೆಬ್ರವರಿ ಎರಡನೇ ವಾರದಲ್ಲಿ ಟೆಂಡರ್ ಅಂತಿಮಗೊಳ್ಳುವ ನಿರೀಕ್ಷೆ ಇದೆ.

 ತುಂಬೆ ಪಾಲಿಕೆ ವ್ಯಾಪ್ತಿಗೆ: ದ.ಕ ಜಿಲ್ಲೆಯಲ್ಲಿ ಆದ್ಯಪಾಡಿ (ಮರವೂರು), ಶಂಭೂರು ಮತ್ತು ತುಂಬೆ ಡ್ಯಾಂ(ನೇತ್ರಾವತಿ)ಗಳ ಹೂಳೆತ್ತುವ ಬಗ್ಗೆ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ತುಂಬೆ ಡ್ಯಾಂನ್ನು ಮಂಗಳೂರು ಮಹಾನಗರಪಾಲಿಕೆಗೆ ವಹಿಸಲಾಗಿದೆ. ಈ ಮೊದಲು ದ.ಕ ಜಿಲ್ಲೆಯಲ್ಲಿ ತುಂಬೆ ಡ್ಯಾಂನಿಂದ ಮರಳನ್ನು ತೆರವುಗೊಳಿಸುವ ಕೆಲಸ 2019ರಲ್ಲಿ ನಡೆದಿತ್ತು. ಈ ಬಾರಿಯೂ ಪಾಲಿಕೆಯೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವುದಕ್ಕೆ ಮುಂದಾಗಿದೆ.

 ಡ್ಯಾಂಗಳಲ್ಲಿ ಸಾವಿರಾರು ಟನ್ ಮರಳು: ಪಶ್ಚಿಮ ಘಟ್ಟದಿಂದ ಹರಿದು ಬರುವ ನದಿಗಳಾಗಿರುವುದರಿಂದ ಕರಾವಳಿ ಜಿಲ್ಲೆಗಳ ಡ್ಯಾಂಗಳಲ್ಲಿ ಸಾಕಷ್ಟು ಮರಳು, ಹೂಳು ತುಂಬಿಕೊಂಡಿದೆ. ಅವುಗಳನ್ನು ತೆರವು ಮಾಡದಿದ್ದರೆ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗುವುದಷ್ಟೇ ಅಲ್ಲ, ಅಣೆಕಟ್ಟೆಗಳಿಗೂ ಅಪಾಯ. ಈ ಕಾರಣದಿಂದ ಮರಳು ತೆರವು ಮಾಡಲು ಸರ್ಕಾರ ಉದ್ದೇಶಿಸಿದೆ.

ಪೂರ್ಣ ಗುತ್ತಿಗೆ: ಮರಳನ್ನು ಯಂತ್ರೋಪಕರಣ (ಕಟ್ಟರ್-ಸಕ್ಷನ್ ಡ್ರೆಜ್ಜರ್ ಅಥವಾ ಬೋಟ್ ಮೌಂಟೆಡ್ ಡ್ರೆಜ್ಜರ್) ಬಳಸಿ ತೆಗೆಯುವುದು, ಅಲ್ಲಿಂದ ಸೂಕ್ತ ಸಂಗ್ರಹಣಾ ಯಾರ್ಡ್‌ಗೆ ಸಾಗಿಸುವುದು ಗುತ್ತಿಗೆದಾರರ ಕೆಲಸ. ಅದಕ್ಕೆ ಪೂರಕವಾಗಿ ರಸ್ತೆಗಳನ್ನು ಅವರೇ ನಿರ್ವಹಣೆ ಮಾಡುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಯಾರ್ಡ್‌ಗೆ ಲೈಟ್ ಅಳವಡಿಕೆ, ಗ್ರಾಹಕರ ವಾಹನಗಳಿಗೆ ಲೋಡ್ ಮಾಡುವುದು, ಅದಕ್ಕೆ ಬೇಕಾದ ಲೋಡರ್ ನಿಯೋಜನೆ ಇವೆಲ್ಲವೂ ಗುತ್ತಿಗೆದಾರರ ಜವಾಬ್ದಾರಿಯಲ್ಲಿ ಬರುತ್ತದೆ.

ಯಾವೆಲ್ಲ ಅಣೆಕಟ್ಟುಗಳು?:

ದಕ್ಷಿಣ ಕನ್ನಡ:

1. ಆದ್ಯಪಾಡಿ (ಫಲ್ಗುಣಿ ನದಿ)

2. ಶಂಭೂರು (ನೇತ್ರಾವತಿ)

3. ತುಂಬೆ

ಉಡುಪಿ ಜಿಲ್ಲೆ:

1. ಬಂಟ್ವಾಡಿ (ಸೌಪರ್ಣಿಕಾ ನದಿ)

2. ತೊಪ್ಲು (ಚಕ್ರಾ)

ಇನ್ನೊಂದು ತಿಂಗಳ ಒಳಗೆ ದ.ಕ ಜಿಲ್ಲೆಯ ಮೂರು ಕಿಂಡಿ ಅಣೆಕಟ್ಟುಗಳಿಂದ ಮರಳೆತ್ತುವ ಕಾರ್ಯ ಶುರುವಾಗಲಿದೆ. ಅದರಲ್ಲೂ ಮಾರಾಟ ಮಾಡುವಾಗ ಮರಳಿನ ದರ 700 ರೂ. ಪ್ರತಿ ಟನ್ ಮೀರುವ ಹಾಗಿಲ್ಲ.

- ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net