Web Exclusive | ಸ್ಯಾಂಡ್ ಮಾಫಿಯಾವೂ ಜೋರು: 2014-20ವರೆಗೆ 41,745 ಪ್ರಕರಣ; 19,988 ಎಫ್​ಐಆರ್

Web Ex
Published on

| ಬೇಲೂರು ಹರೀಶ ಬೆಂಗಳೂರು

ಅಕ್ರಮ ಕಲ್ಲು ಗಣಿಗಾರಿಕೆ ಜತೆಗೆ ಮರಳು ಗಣಿಗಾರಿಕೆಯೂ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಎಷ್ಟೇ ಸರ್ಕಾರಗಳು ಆಡಳಿತ ನಡೆಸಿದರೂ ರಾಜ್ಯದಲ್ಲಿ ಪ್ರಬಲವಾಗಿ ಬೇರೂರಿರುವ ಸ್ಯಾಂಡ್ ಮಾಫಿಯಾವನ್ನು ಮಟ್ಟಹಾಕಲು ವಿಫಲವಾಗಿವೆ. 2014-15ರಿಂದ 2019-20ರವರೆಗೆ ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಹಾಗೂ ಫಿಲ್ಟರ್ ಮರಳು ದಂಧೆ ಸಂಬಂಧ 41,745 ಪ್ರಕರಣ ವರದಿಯಾಗಿವೆ. ಈ ಪೈಕಿ 19,988 ಎಫ್​ಐಆರ್ ದಾಖಲಾಗಿವೆ. 41,745 ಪ್ರಕರಣಗಳ ಪೈಕಿ ಅನಧಿಕೃತ ಮರಳು ಗಣಿಗಾರಿಕೆ ಸಂಬಂಧ 2,326, ಸಾಗಾಣಿಕೆ 37,512, ದಾಸ್ತಾನು 1,320 ಹಾಗೂ ಫಿಲ್ಟರ್ ಮರಳು ದಂಧೆಯಡಿ 587 ಕೆಸ್ ವರದಿಯಾಗಿವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಉಡುಪಿಯಲ್ಲೇ ಹೆಚ್ಚು: ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಮಂಡ್ಯ, ಗದಗ, ಉತ್ತರ ಕನ್ನಡ, ಕೊಡಗು, ಬೆಳಗಾವಿ, ಚಿತ್ರದುರ್ಗ, ಯಾದಗಿರಿ, ರಾಮನಗರ, ದಾವಣಗೆರೆ, ಮೈಸೂರು ಹಾಗೂ ಬೀದರ್, ಚಿಕ್ಕಮಗಳೂರು ಸೇರಿ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ವಿಶೇಷ.

ಟಾಸ್ಕ್​ಪೋರ್ಸ್ ಹಲ್ಲು ಕಿತ್ತ ಹಾವು: ಅನಧಿಕೃತ ಎಂ ಸ್ಯಾಂಡ್, ಜಲ್ಲಿ ಕ್ರಷರ್, ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ಘಟಕಗಳನ್ನು ಮಟ್ಟಹಾಕಲು ರಚನೆಯಾಗಿರುವ ಇಲಾಖೆಯ ಟಾಸ್ಕ್​ಪೋರ್ಸ್ ನಾಮ್ೇ ವಾಸ್ತೆ ಎಂಬಂತೆ ಕಾರ್ಯನಿರ್ವಹಿಸುತ್ತಿದೆ. ಅರಣ್ಯ, ಕಂದಾಯ, ಆರ್​ಟಿಒ, ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳನ್ನು ಒಳಗೊಂಡಿರುವ ಇದು ಹಲ್ಲು ಕಿತ್ತ ಹಾವಿನಂತಾಗಿದೆ. ಪ್ರಭಾವಿಗಳ ಮಕ್ಕಳು ಗಣಿಗಾರಿಕೆಯಲ್ಲಿ ಸಿಕ್ಕಿಬಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶೇ.85 ರಾಜಕೀಯ ಮುಖಂಡರ ಹಿಂಬಾಲಕರೇ ಇರುತ್ತಾರೆ. ಕೇಸ್ ಹಾಕಿದ್ದರೂ ಪ್ರಭಾವ ಬಳಸಿ ಪ್ರಕರಣಗಳನ್ನು ಮುಚ್ಚಿಹಾಕುತ್ತಾರೆ. ಹಾಗಾಗಿ, ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಇಲಾಖೆ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಪರಿಸರವಾದಿಗಳ ಆತಂಕ: ಸರ್ಕಾರ ಹಣದ ಆಸೆಗಾಗಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದೆ. ಗ್ರಾನೈಟ್ಸ್, ಕಲ್ಲು, ಮರಳು ಮತ್ತು ಅದಿರು ಗಣಿಗಾರಿಕೆಯಿಂದಾಗಿ ಶೇ.5ಕ್ಕಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ರಾಡೆಕ್ಸ್ ಎಂಬ ಅಂಶ ಪರಿಸರಕ್ಕೆ ಸೇರಿ ಆನೇಕ ಜೀವಚರಗಳು ಮತ್ತು ಮಾನವ ಸಂಕುಲದ ನಾಶಕ್ಕೆ ಎಡೆಮಾಡಿಕೊಡುತ್ತಿದೆ. ಜತೆಗೆ, ಗಣಿಗಾರಿಕೆ ಮಾಡಿರುವ ಜಾಗದಲ್ಲಿ ಹಾಗೂ ಸುತ್ತಮುತ್ತ ಇರುವ ಕೃಷಿ ಭೂಮಿಗಳಲ್ಲಿ ಸರಿಯಾಗಿ ಬೆಳೆ ಬೆಳೆಯುವುದಕ್ಕೆ ಆಗುವುದಿಲ್ಲ. ಮರಳು ಗಣಿಗಾರಿಕೆ ಮಾಡಿದ್ದಾಗ ಆ ಜಾಗವು ಬರಿದಾಗಲಿದ್ದು, ಮಳೆಗಾಲದಲ್ಲಿ ನೀರು ನಿಲ್ಲದ ಕಾರಣಕ್ಕೆ ಅಂತರ್ಜಲ ಮಟ್ಟ ಕುಸಿತವಾಗಲಿದೆ. ಒಟ್ಟಿನಲ್ಲಿ ಗಣಿಗಾರಿಕೆಯಿಂದ ಇಡೀ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಫಿಲ್ಟರ್ ದಂಧೆ: ನದಿ ತೀರಗಳಲ್ಲಿ ಮರಳು ಗಣಿಗಾರಿಕೆ ನಿಷೇಧವಿದ್ದರೂ ಪ್ರತಿ ವರ್ಷ ಸಾವಿರಾರು ಟನ್ ಮರಳು ತೆಗೆಯಲಾಗುತ್ತಿದೆ. ರಾತ್ರಿ ವೇಳೆ ದಂಧೆಕೋರರು ಮರಳು ತೆಗೆದು ರಾಶಿ ಹಾಕಿ ಖರೀದಿದಾರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೋಲಾರ, ತುಮಕೂರು, ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಫಿಲ್ಟರ್ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಫಿಲ್ಟರ್ ಮರಳು ಘಟಕಗಳಲ್ಲಿ ಸಂಜೆ ವೇಳೆ ಲಾರಿಗಳಿಗೆ ಮರಳು ಲೋಡ್ ಮಾಡಲಾಗುತ್ತದೆ. ಇದು ನೈಸರ್ಗಿಕ ಮರಳು ಎಂದು ಜನರನ್ನು ನಂಬಿಸಿ ಪ್ರತಿ ಟನ್​ಗೆ 6 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ತೊಂದರೆಗಳೇನು?

  • ನೀರು ಕಲುಷಿತ
  • ಜಲಚರಗಳ ಸಾವು
  • ಅನಾರೋಗ್ಯ ಭೀತಿ
  • ಪರಿಸರಕ್ಕೆ ಹಾನಿ
  • ಮಾರಕ ಕಾಯಿಲೆ ಉಲ್ಬಣ
  • ಅಂತರ್ಜಲ ಮಟ್ಟ ಕುಸಿತ
  • ನದಿಗಳು ಬರಿದಾಗುವ ಭೀತಿ
  • ಭವಿಷ್ಯದಲ್ಲಿ ಮರಳು ಸಮಸ್ಯೆ ಸೃಷ್ಟಿ

ಪರವಾನಗಿ ಮರಳು ಗಣಿಗಾರಿಕೆ ವಿವರ: ಪಿಡಬ್ಲ್ಯುಡಿ 5, ಹರಾಜಿನಲ್ಲಿ ಗುತ್ತಿಗೆ 237, ಪಟ್ಟಾ ಭೂಮಿ ಲೈಸೆನ್ಸ್ 44, ಸರ್ಕಾರಿ ಇಲಾಖೆ ನಿರ್ವಹಿಸುವ ಬ್ಲಾಕ್ 18 ಸೇರಿ 304 ಬ್ಲಾಕ್​ಗಳು ಪ್ರಸ್ತುತವಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ 43 ದಶಲಕ್ಷ ಮಟ್ರಿಕ್ ಟನ್ ಮರಳು ತೆಗೆಯಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net