

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮರಳು ಬೇಡಿಕೆ, ಪೂರೈಕೆ, ಅಕ್ರಮದ ವಿರುದ್ಧ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ವಿಧಾನ ಪರಿಷತ್‌ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಲೆಕ್ಕ ಒಪ್ಪಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಪ್ರಶ್ನೆಗಳಿಗೆ ಉತ್ತರಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ ಜಡ್ ಪ್ರದೇಶದಲ್ಲಿ 2018-19 ಹಾಗೂ 2019-20ರಲ್ಲಿ 22 ದಿಬ್ಬಗಳಿಂದ 11.53 ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆಗೆಯಲಾಗಿತ್ತು. 2020-21ರಲ್ಲಿ 13 ದಿಬ್ಬಗಳಿಂದ 10.58, 2018-19ರಲ್ಲಿ 5 ದಿಬ್ಬಗಳಿಂದ 0.17, ಉಡುಪಿ ಜಿಲ್ಲೆಯಲ್ಲಿ 2019-20ರಲ್ಲಿ 8 ದಿಬ್ಬಗಳಿಂದ 7.96, 2020-21ರಲ್ಲಿ 10 ದಿಬ್ಬಗಳಿಂದ 7.13 ಲಕ್ಷ ಮೆಟ್ರಿಕ್ ಟನ್ ಮರಳಿನ ದಿಬ್ಬಗಳಿವೆ.
ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶಗಳಲ್ಲಿ 2018ರಿಂದ 2021ರ ವರೆಗೆ 49 ಬ್ಲಾಕ್‌ಗಳಲ್ಲಿ 12.71 ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‌ಗಳನ್ನು ಗುರುತಿಸಿದ್ದೇವೆ. ಉಡುಪಿೆಯಲ್ಲಿ 2018 ರಿಂದ 2021ರ ವರೆಗೆ 28 ಬ್ಲಾಕ್‌ಗಳಲ್ಲಿ 3.47 ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಮತ್ತು ನಿರ್ಮಾಣ ಕಾಮಗಾರಿ ನಿರ್ವಹಿಸುವ ಇತರೆ ಇಲಾಖೆಗಳ ಮೂಲಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2018-19ರಲ್ಲಿ 7.10 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಇದರಲ್ಲಿ 6.22 ಲಕ್ಷ ಮೆಟ್ರಿಕ್ ಟನ್ ಪೂರೈಸಿದ್ದು, 373.42 ಲಕ್ಷ ರೂ. 2019-20ರಲ್ಲಿ 8.00 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯಲ್ಲಿ 5.20 ಮರಳು ಪೂರೈಸಿದ್ದು, 301.38 ಲಕ್ಷ ರೂ ರಾಜಸ್ವವನ್ನು ಸಂಗ್ರಹಿಸಲಾಗಿದೆ ಎಂದರು.
2020-21ರ ಫೆಬ್ರವರಿ ಅಂತ್ಯಕ್ಕೆ 9 ಲಕ್ಷ ಮೆಟ್ರಿಕ್ ಟನ್ ಮರಳು ಬೇಡಿಕೆ ಇದ್ದರೆ ಇದರಲ್ಲಿ 2.96 ಲಕ್ಷ ಮೆಟ್ರಿಕ್ ಟನ್ ಪೂರೈಸಿದ್ದು, 274.67 ಲಕ್ಷ ರೂ., ಉಡುಪಿಯಲ್ಲಿ 2018-19ರಲ್ಲಿ 8 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಪೈಕಿ 1.41 ಮೆಟ್ರಿಕ್ ಟನ್ ವಿತರಣೆ ಮಾಡಿ 84.84 ಲಕ್ಷ ರೂ. ರಾಜಸ್ವವನ್ನು ಸಂಗ್ರಹಿಸಲಾಗಿದೆ. 2019-20ರಲ್ಲಿ 8.50 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಪೈಕಿ 4.23 ಲಕ್ಷ ಮೆಟ್ರಿಕ್ ಟನ್ ವಿತರಿಸಿದ್ದು, ಇದೇ ವರ್ಷ 253.85 ಲಕ್ಷ ರಾಜಸ್ವವನ್ನು ಸಂಗ್ರಹಿಸಲಾಗಿದೆ. ಪ್ರಸಕ್ತ ವರ್ಷದ ಫೆಬ್ರವರಿ ಅಂತ್ಯಕ್ಕೆ 9 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಇದರಲ್ಲಿ 4.86 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. 393.85 ಲಕ್ಷ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಲವಣಾಂಶರಹಿತ ಮರಳು ಪೂರೈಕೆ: ಕರಾವಳಿಗೆ ಲವಣಾಂಶರಹಿತ ಮರಳು ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಸಚಿವ ನಿರಾಣಿ ಹೇಳಿದರು. ಲವಣಾಂಶವುಳ್ಳ ಮರಳು ಬಳಕೆಯಿಂದ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ ಇಲಾಖೆಗಳು, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನೇತೃತ್ವದ ಸಮಿತಿ ನೀಡಿದ ವರದಿ ಆಧಾರದಲ್ಲಿ ಈ ಕ್ರಮವಹಿಸಲಾಗಿದೆ ಎಂದರು.