

ಚೆನ್ನೈ: ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಕೆ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಹ ಖಡಕ್ ತಿರುಗೇಟನ್ನು ನೀಡಿದ್ದಾರೆ.
ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕರೊನಾವನ್ನು ವಿರೋಧ ಮಾಡಬಾರದು, ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಈ ಹೇಳಿಕೆಯನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಖಂಡಿಸಿದ್ದು, ಉದಯನಿಧಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹೇಳಿಕೆಯ ಮೂಲಕ ಶೇ. 80 ರಷ್ಟು ಜನಸಂಖ್ಯೆಯ ನರಮೇಧಕ್ಕೆ ಉದಯನಿಧಿ ಅವರು ಕರೆ ನೀಡುತ್ತಿದ್ದಾರೆ ಎಂದಿದ್ದಾರೆ.
ಉದಯನಿಧಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ಡಿಎಂಕೆ ಸರ್ಕಾರದ ಸಚಿವರು. ಇವರು ಸನಾತನ ಧರ್ಮವನ್ನು ಮಲೇರಿಯಾ, ಡೆಂಘೆಗೆ ಹೋಲಿಕೆ ಮಾಡಿದ್ದಾರೆ. ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವಲ್ಲದೆ, ಸಂಪೂರ್ಣ ನಿರ್ಮೂಲನೆ ಮಾಡಬೇಕೆಂಬುದು ಅವರ ಅಭಿಪ್ರಾಯವಾಗಿದೆ. ಅದರರ್ಥ ಭಾರತದಲ್ಲಿ ಸನಾತನ ಧರ್ಮವನ್ನು ಅನುಸರಿಸುವ ಶೇ. 80 ರಷ್ಟು ಮಂದಿಯ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ. ಡಿಎಂಕೆ ಪಕ್ಷವು ಕಾಂಗ್ರೆಸ್ನ ದೀರ್ಘಕಾಲ ಮಿತ್ರಪಕ್ಷವಾಗಿದೆ. ಮುಂಬೈನಲ್ಲಿ ನಡೆದ ಇಂಡಿಯಾ ವಿಪಕ್ಷ ಕೂಟದಲ್ಲಿ ಇದು ಒಪ್ಪಿಗೆಯಾಗಿದೆಯೇ? ಎಂದು ಅಮಿತ್ ಮಾಳವೀಯ ಎಕ್ಷ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಅಮಿತ್ ಮಾಳವೀಯ ಹೇಳಿಕೆಗೆ ಉದಯನಿಧಿ ಸ್ಪಷ್ಟನೆ ನೀಡಿದ್ದು, ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ನಾನು ಕರೆಯನ್ನೇ ಕೊಟ್ಟಿಲ್ಲ. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸನಾತನ ಧರ್ಮ ಕಾರಣದಿಂದಾಗಿ ಬದಿಗೆ ಸರಿದಿರುವ ಬಡ ಸಮುದಾಯಗಳ ಪರವಾಗಿ ನಾನು ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ಸಂಬಂಧಿಸಿದ ಯಾವುದೇ ಕಾನೂನು ಸವಾಲನ್ನು ನಾನು ಎದುರಿಸಲು ಸಿದ್ಧನಾಗಿದ್ದೇನೆ. ಡಿಎಂಕೆ ಸರ್ಕಾರವು ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಹೋರಾಡುತ್ತದೆ.
ಇಂತಹ ಸಾಮಾನ್ಯ ಕೇಸರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ಅನುಯಾಯಿಗಳಾದ ನಾವು, ನಮ್ಮ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)