

ಬಾಗಲಕೋಟೆ: ಇಂದು ವೇದಿಕೆಯಲ್ಲಿ ಲೋಕಸಭಾ ಚುನಾವಣೆ ಕುರಿತು ಜನರನ್ನು ಉದ್ದೇಶಿಸಿ ಮಾತನಾಡಿದ ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್, ಹೆಣ್ಣು ಮಕ್ಕಳಿಗೆ ಮಾಸಿಕ 2000 ರೂ. ಹಣ ಕೊಡುತ್ತಿರುವ ರಾಜ್ಯ ಸರ್ಕಾರ, ಪುರುಷರಿಗೆ ಯಾಕೆ ಕೊಡ್ತಿಲ್ಲ ಎಂಬ ಸಂಗತಿಯನ್ನು ಬಹಿರಂಗವಾಗಿ ಎಲ್ಲರ ಮುಂದೆ ತೆರೆದಿಟ್ಟರು. ಇದು ಅನೇಕರನ್ನು ನಗೆಗಡಲಿಗೆ ದೂಡಿತು.
"ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ನೇರ ವಾಗ್ದಾಳಿ ನಡೆಸಿದ ಸಚಿವ ಶಿವಾನಂದ ಪಾಟೀಲ, ಕರ್ನಾಟಕದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲ್ಲ. ಚುನಾವಣೆ ಬಂದಾಗ ಇಪ್ಪತ್ತು ಸಲ ಬರ್ತಾರೆ. ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ದೃಷ್ಟಿಕೋನದಿಂದ ಮಾತ್ರ ಮೋದಿ ರಾಜ್ಯಕ್ಕೆ ಬರುತ್ತಾರೆ ವಿನಃ ಜನರ ದುಃಖ ಆಲಿಸಲು ಅಲ್ಲ" ಎಂದರು.
"ದೇಶದಲ್ಲಿ 14 ಲಕ್ಷ ಕೋಟಿ ರೂ. ಉದ್ಯಮಿದಾರರ ಸಾಲ ಮನ್ನಾ ಮಾಡಿದ್ದಾರೆ. ಆದರೆ, ನಮ್ಮ ರೈತರಿಗೆ ಬರಗಾಲ ಪರಿಹಾರ ಕೊಡಬೇಕು ಎನ್ನುವ ಕನಿಷ್ಠ ಚಿಂತನೆ ಅವರಿಗೆ ಬರಲಿಲ್ಲ. ದೇಶದ 15 ರಾಜ್ಯಗಳಲ್ಲಿ ಬರಗಾಲ ಬಿದ್ದರೆ ಕೇಂದ್ರ ಸರ್ಕಾರ ಪರಿಹಾರ ಕೊಡಲ್ಲ. ನಿರ್ಮಲಾ ಸೀತಾರಾಮನ್ ಹೇಳ್ತಾರೆ, ನಾವು ತಡವಾಗಿ ಪ್ರಸ್ತಾವನೆ ಕೊಟ್ಟಿದ್ದೇವೆ ಅಂತ. ಅಸಲಿಗೆ ನಾವು ಕೇಂದ್ರಕ್ಕೆ ಅಕ್ಟೋಬರ್ ತಿಂಗಳಲ್ಲಿಯೇ ಮನವಿ ಕೊಟ್ಟಿದ್ದೇವೆ. ರಾಜ್ಯದಿಂದ ಗೆದ್ದು ಹೋಗಿದ್ದ 25 ಸಂಸದರು ಒಮ್ಮೆಯೂ ಈ ಬಗ್ಗೆ ಮಾತನಾಡಲಿಲ್ಲ" ಎಂದು ಹೇಳಿದರು.
ಇನ್ನು ವೇದಿಕೆಯಲ್ಲಿ ಮಾತನಾಡಿದ ಸಂಯುಕ್ತಾ ಪಾಟೀಲ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಣ್ಮಕ್ಕಳಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಿದೆ. ಆದರೆ ಗಂಡು ಮಕ್ಕಳಿಗೆ ಯಾಕೆ ಕೊಡ್ತಿಲ್ಲ ಅಂತ ಯಾರಿಗಾದರೂ ಗೊತ್ತಾ? 2000 ಸಾವಿರ ಅವರಿಗೆ ಗ್ಯಾರಂಟಿ ಹಣ ಹಾಕ್ತಿವಿ. ನಿಮಗೆ (ಪುರಷರಿಗೆ) ಯಾಕೆ ಹಾಕಿಲ್ಲ ಅಂದರೆ, ನಿಮಗೆ ಹಾಕಿದರೆ ಸಂಜೆ ಹೊತ್ತಿಗೆ ಅಂಗಡಿಗೆ ಹೋಗ್ತಿರಿ, ಹೋಗಿ ಕಾಲಿ ಮಾಡ್ತೀರಿ ಅನ್ನೋದು ಗೊತ್ತಿದೆ" ಎಂದು ಹೇಳುವ ಮೂಲಕ ಹಾಸ್ಯಚಟಾಕಿ ಸಿಡಿಸಿದರು.