ಸಂಪಂಗಿಗೆ ಟೀಕಿಸುವ ನೈತಿಕ ಹಕ್ಕಿಲ್ಲ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು

27-klr-6
Published on

ಕೋಲಾರ/ಕ್ಯಾಲನೂರು: ರಾಜ್ಯದ ಶಕ್ತಿಸೌಧ, ಜನರ ದೇವಾಲಯದಂತಿರುವ ವಿಧಾನಸೌಧ ಪಕ್ಕದ ಶಾಸಕರ ಭವನದಲ್ಲೇ ಲಂಚ ಪಡೆದು ಸಿಕ್ಕಿಹಾಕಿಕೊಂಡು ಅಪರಾಧಿಯೆಂದು ಸಾಬೀತಾಗಿ ಶಿಕ್ಷೆ ಅನುಭವಿಸಿರುವ ಮಾಜಿ ಶಾಸಕ ವೈ. ಸಂಪಂಗಿಗೆ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು.

ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಕುರಗಲ್ ಗ್ರಾಮದಲ್ಲಿ ಬುಧವಾರ ನಡೆದ 2020-21ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ ಜನಸೇವಾ ಕೇಂದ್ರದ ಯೋಜನೆಯಡಿ ನಿರ್ಮಿತವಾದ ಗೋದಾಮು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನೀವೇ ಪರಮ ಭ್ರಷ್ಟರು. ಇನ್ನು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಶಾಸಕರಾಗಿದ್ದಾಗ ಲಂಚ ಪಡೆದು ಲೋಕಾಯುಕ್ತಕ್ಕೆ ಸಿಕ್ಕಿಹಾಕಿಕೊಂಡು ಜಿಲ್ಲೆಯ ಗೌರವವನ್ನು ಮಣ್ಣು ಪಾಲು ಮಾಡಿದ್ದೀರಿ. ಆರೋಪ ಸಾಬೀತಾಗಿ, ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿರುವ ಸಂಪಂಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲದೇ ಹತಾಶರಾಗಿ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ಮೊದಲು ಕಳಂಕರಹಿತರಾಗಿ ಹೊರಬನ್ನಿ, ಆನಂತರ ಬ್ಯಾಂಕ್ ಬಗ್ಗೆ ಮಾತನಾಡಿ ಎಂದು ಛೇಡಿಸಿದರು.

ಸಂಪಂಗಿ ಹಾಗೂ ಬ್ಯಾಂಕ್‌ನ ಮಾಜಿ ನಿರ್ದೇಶಕ ಹನುಮೇಗೌಡರಂತಹ ಕಳಂಕಿತ ವ್ಯಕ್ತಿಗಳು ಮಾಡುವ ಟೀಕೆಗೆ ನಾನು ಮತ್ತು ಆಡಳಿತ ಮಂಡಳಿ ಹೆದರಲ್ಲ, ಡಿಸಿಸಿ ಬ್ಯಾಂಕಿನಲ್ಲಿ ತಪ್ಪಾಗಿದ್ದರೆ ಸಾಬೀತು ಮಾಡಲಿ, ಆ ಕ್ಷಣವೇ ನಾನು ಸಾರ್ವಜನಿಕ ಜೀವನದಿಂದ ಹೊರಗೆ ಹೋಗುತ್ತೇನೆ. ನಿಮ್ಮ ರಾಜಕೀಯಕ್ಕಾಗಿ ಬ್ಯಾಂಕನ್ನು ಬಲಿಕೊಡುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಕೆ.ವಿ.ದಯಾನಂದ್ ಮಾತನಾಡಿ, ್ಯಾಕ್ಸ್‌ಗಳ ಬಹುಸೇವಾ ಕೇಂದ್ರದಡಿ ನಬಾರ್ಡ್‌ನಿಂದ 36 ಲಕ್ಷ ರೂ. ಸಾಲ ಹಾಗೂ ಸೊಸೈಟಿಯ ಸ್ವಂತ ಬಂಡವಾಳ 19 ಲಕ್ಷ ಹೂಡಿ ಒಟ್ಟು 55 ಲಕ್ಷ ವೆಚ್ಚದಲ್ಲಿ ಚನ್ನಸಂದ್ರ ಮತ್ತು ಕುರಗಲ್‌ನಲ್ಲಿ ಗೋದಾಮು ನಿರ್ಮಿಸಿ ಮಾದರಿ ಸಂಘವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್, ನಾಗನಾಳ ಸೋಮಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಸಹಕಾರಿ ಯೂನಿಯನ್ ನಿರ್ದೇಶಕ ವೆಂಕಟೇಶಪ್ಪ, ಕಡಗಟ್ಟೂರು ಎಸ್‌ಎಫ್‌ಸಿಎಸ್ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ಕೆ.ಎಸ್.ಕೃಷ್ಣಪ್ಪ, ಬಿ.ಮುನಿರಾಜು, ಕೆ.ಎಂ.ವೆಂಕಟೇಶಪ್ಪ, ಡಿ.ರಾಜಣ್ಣ, ಬಿ.ವಿ.ರಾಮಾಂಜನೇಯ, ಎಂ.ಮಂಜುನಾಥ, ಅಮರೇಶ, ವಿಜಯಮ್ಮ, ಬೈರಮ್ಮ,ಸಿಇಒ ಎನ್.ಮುನೀಶ್ವರಪ್ಪ ಮುಖಂಡರಾದ ರಮೇಶ್ ಇದ್ದರು.

ನಾಲಿಗೆ ಹಿಡಿತದಲ್ಲಿರಲಿ: ಡಿಸಿಸಿ ಬ್ಯಾಂಕ್ ವಿರುದ್ಧ ದಾರಿಯಲ್ಲಿ ಹೋಗುವ ದಾಸಪ್ಪನವರೆಲ್ಲ ನಾನಾ ರೀತಿ ಮಾತನಾಡಿಕೊಳ್ಳುತ್ತಾರೆ. ಒಂದು ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಸರಿಯಲ್ಲ, ಬ್ಯಾಂಕಿಗೆೆ ಬೀಗ ಹಾಕುವ ಸ್ಥಿತಿ ಬಂದಿತ್ತು, ಡಿಸಿಸಿ ಬ್ಯಾಂಕ್ ಕತೆ ಮುಗಿತು ಎಂದೇ ಭಾವಿಸಿದ್ದೆ. ಅಂತಹ ಸಂಸ್ಥೆಗೆ ಮರುಜೀವ ನೀಡಿ ದೇಶದಲ್ಲೇ ನಂ.1 ಮಾಡಿದ್ದಾರೆ. ಇದನ್ನು ಸಹಿಸದೆ ಮಾತನಾಡುವ ದಾರಿಹೋಕರ ಮಾತುಗಳಿಗೆ ಕಿವಿಗೊಡದಿರಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ಬ್ಯಾಂಕ್ ಆಡಳಿತ ಮಂಡಳಿತೆ ಕಿವಿಮಾತು ಹೇಳಿದರಲ್ಲದೆ ಸಹಕಾರಿ ಕ್ಷೇತ್ರದ ಬಗ್ಗೆ ಅರಿವಿಲ್ಲದವರು ಬಾಯಿ, ನಾಲಿಗೆ ಮೇಲೆ ಹಿಡಿತ ಇಟ್ಟು ಮಾತನಾಡಬೇಕು ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net