ಆರೋಗ್ಯ ಎಚ್ಚರಿಕೆ ಪಟ್ಟಿಗೆ ಸೇರಿದ ಸಮೋಸಾ, ಜಿಲೇಬಿ; ಇನ್ಮುಂದೆ ಎಚ್ಚರಿಕೆ ಫಲಕ ಕಡ್ಡಾಯ| snacks

samosa
Published on

ನಾಗ್ಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಬಂದಿರುವ ಆದೇಶದಲ್ಲಿ ಸಮೋಸಾ ಮತ್ತು ಜಿಲೇಬಿಯಂತಹ ಆಹಾರ ಪದಾರ್ಥಗಳ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ನಾಗ್ಪುರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅಮರ್ ಆಮ್ಲೆ ಹೇಳಿದ್ದಾರೆ.

ನಾಗ್ಪುರ ಎಐಐಎಂಎಸ್ ಸೇರಿದಂತೆ ಎಲ್ಲಾ ಕೇಂದ್ರೀಯ ಸಂಸ್ಥೆಗಳು, ಜನಸಾಮಾನ್ಯರ ದೈನಂದಿನ ತಿಂಡಿ ತಿನಸುಗಳಲ್ಲಿ ಎಷ್ಟರ ಮಟ್ಟಿಗೆ ಜಿಡ್ಡು ಮತ್ತು ಸಕ್ಕರೆ ಅಂಶಗಳು ಅಡಗಿವೆ ಎಂಬ ಬಗ್ಗೆ ಫಲಕಗಳನ್ನು ಅಳವಡಿಸುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಜಂಕ್ ಫುಡ್ ಉತ್ಪನ್ನಗಳನ್ನು ತಂಬಾಕಿನ ಸಾಲಿಗೆ ಸೇರಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಫಲಕಗಳನ್ನು ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ, ವಿಶೇಷವಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಜನರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಎಂಬುದು ಇದ್ದರ ಉದ್ದೇಶವಾಗಿದೆ. ಸಮೋಸಾ ಮತ್ತು ಜಿಲೇಬಿ ತಿನ್ನುವಾಗ ಜನರು ತಾವು ತಿನ್ನುವ ಆಹಾರದಲ್ಲಿ ಎಷ್ಟು ಸಕ್ಕರೆ, ಎಣ್ಣೆ ಮತ್ತು ಕೊಬ್ಬು ಇದೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾದ ಉಪಕ್ರಮವನ್ನು ಕೈಗೊಂಡಿದ್ದಾರೆ, ಇದರ ಅಡಿಯಲ್ಲಿ ಆರೋಗ್ಯ ಸಚಿವಾಲಯದ ಪರವಾಗಿ ಸರ್ಕಾರವು ಬಹಳ ದೊಡ್ಡ ಹೆಜ್ಜೆಯನ್ನು ಇಟ್ಟಿದೆ ಎಂದು ಡಾ. ಅಮರ್ ಆಮ್ಲೆ ಹೇಳಿದರು.

ದೇಶಾದ್ಯಂತ ಸಮೋಸಾ ಮತ್ತು ಜಿಲೇಬಿಗಳನ್ನು ಪೂರೈಸುವ ಎಲ್ಲಾ ಸರ್ಕಾರಿ ಕ್ಯಾಂಟೀನ್‌ಗಳು ಮತ್ತು ತಿನಿಸುಗಳ ಗೋಡೆಗಳ ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ಅಂಟಿಸುವುದು ಈಗ ಕಡ್ಡಾಯವಾಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಲ್ಲಾ ಕೇಂದ್ರ ಸಂಸ್ಥೆಗಳು ಎಣ್ಣೆ ಮತ್ತು ಸಕ್ಕರೆ ಫಲಕಗಳನ್ನು ಸ್ಥಾಪಿಸಲು ಆದೇಶಿಸಿವೆ. ಈ ಪೋಸ್ಟರ್‌ಗಳು ಪ್ರತಿದಿನ ಸೇವಿಸುವ ಉಪಾಹಾರದಲ್ಲಿ ಎಷ್ಟು ಸಕ್ಕರೆ ಮತ್ತು ಎಣ್ಣೆ ಅಡಗಿದೆ ಎಂಬುದನ್ನು ಹೇಳುತ್ತವೆ.

(ಏಜೆನ್ಸೀಸ್)

ದೇಶದಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ ಬಗ್ಗೆ ಆರೋಗ್ಯ ಸಚಿವಾಲಯದ ಆಂತರಿಕ ದಾಖಲೆ ಗಂಭೀರ ಕಳವಳ ವ್ಯಕ್ತಪಡಿಸಿದೆ. 2050 ರ ವೇಳೆಗೆ ಭಾರತದಲ್ಲಿ 449 ಮಿಲಿಯನ್ ಜನರು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಡಿಮೆಯಾದ ದೈಹಿಕ ಚಟುವಟಿಕೆಯಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net