

ಶಿವಮೊಗ್ಗ: ಪರಿಶಿಷ್ಟ ಜಾತಿಗಳಿಗೆ ಇರುವ ಶೇ.15ರಷ್ಟು ಮೀಸಲಾತಿಯನ್ನು ಸಮಗಾರ ಉಪಜಾತಿಗಳ ಜನಸಂಖ್ಯಾವಾರು ವರ್ಗೀಕರಿಸಿ ಶೇ.3ರಷ್ಟು ಒಳಮೀಸಲಾತಿಗೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಸಮಗಾರ ಜಿಲ್ಲಾ ಸಂಘದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳಲ್ಲಿ ಬರುವ ಅಸ್ಪಶ್ಯ ಜಾತಿ, ಉಪಜಾತಿಗಳು, ಏಕರೂಪದ ಉಪಜಾತಿಗಳಲ್ಲ. ಅವುಗಳಿಗೆ ಅಗೋಚರ ಏಕರೂಪಗಳಿಲ್ಲ ಎಂದು ಗುರುತಿಸಲಾಗಿದೆ. ಈ ಉಪಜಾತಿಗಳಲ್ಲಿ ಅತಿ ಹಿಂದುಳಿದ, ಈವರೆಗೂ ಸರ್ಕಾರದ ಸೌಲಭ್ಯಗಳು ತಲುಪದಿರುವ ಉಪಜಾತಿಗಳಿಗೆ ಸರ್ಕಾರದ ಸವಲತ್ತು ಸಮಾನವಾಗಿ ತಲುಪಲು ಒಳಮೀಸಲಾತಿ ವರ್ಗೀಕರಣ ಮಾಡಿಕೊಳ್ಳುವ ಅಧಿಕಾರವನ್ನು ಭಾರತದ ಸಂವಿಧಾನ ಆಯಾ ರಾಜ್ಯಗಳಿಗೆ ಕಲ್ಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಆ.1ರಂದು ಐತಿಹಾಸಿಕ ತೀರ್ಪು ನೀಡಿದೆ.
ಅತಿ ಹಿಂದುಳಿದ, ಈವರೆಗೂ ಯಾವುದೇ ಹೆಚ್ಚಿನ ಸವಲತ್ತು ಪಡೆಯದ ಜಾತಿ, ಉಪಜಾತಿಗಳ ಸಾಮಾಜಿಕ ಸ್ಥಿತಿಗತಿ ಆಧಾರಿಸಿ ವರ್ಗೀಕರಣ ಮಾಡುವುದು ಆದ್ಯತೆಯ ಕೆಲಸವಾಗಬೇಕು ಎಂದು ಸಂಘದ ಸದಸ್ಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಮುಖರಾದ ವೆಂಕಟರಮಣ ಹೊನ್ನಾವರ್ಕರ್, ಚನ್ನವೀರಪ್ಪ ಗಾಮನಗಟ್ಟಿ, ಗೋವಿಂದ ನಾಯ್ಕ, ನಾಗೇಂದ್ರ ಶಿರೂರ್ಕರ್, ಕೆ.ಎನ್.ಅಶೋಕ್‌ಕುಮಾರ್, ಗೋಪಾಲ್ ಕದಂ, ಶಿವಾನಂದ್, ಪರಶುರಾಮ್ ಗಾಮನಗಟ್ಟಿ, ಮಂಜುನಾಥ್ ಕದಂ, ರಾಘವೇಂದ್ರ ಹೊನ್ನಾವರ್ಕರ್, ಗಣೇಶ್, ಜಯಂತ್ ಹೊನ್ನಾವರ್ಕರ್ ಇತರರಿದ್ದರು.