

ಮಹದೇಶ್ವರ ಬೆಟ್ಟ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಎಂ.ನಾಗೇಂದ್ರ (ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ) ಅವರ ಪಟ್ಟಾಭಿಷೇಕ ಮಹೋತ್ಸವ ಇಂದು(ಶನಿವಾರ) ಬೆಳಗ್ಗೆ 4.30ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿತು.
ಪಟ್ಟಾಭಿಷೇಕದ ಅಂಗವಾಗಿ ಮಠದಲ್ಲಿ ಬೆಳಗ್ಗೆ ಪಂಚಕಳಸ ಪೂಜಾಪೂರ್ವಕ, ಶ್ರೀ ಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಶತನಾಮಾವಳಿ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ಜರುಗಿದವು. ಈ ವೇಳೆ ನಿಕಟಪೂರ್ವ ಮಠಾಧ್ಯಕ್ಷ ಶ್ರೀಗುರುಸ್ವಾಮಿ ಅವರು ನಾಗೇಂದ್ರ ಅವರನ್ನು ಆಶೀರ್ವದಿಸಿದರು.
ಮಠದ ಗುರು ಸ್ವಾಮೀಜಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಕಿರಿಯ ಶ್ರೀಗಳಾಗಿದ್ದ ಇಮ್ಮಡಿ ಮಹದೇವಸ್ವಾಮಿ ‘ಸುಳ್ವಾಡಿ ವಿಷ ಪ್ರಸಾದ ಪ್ರಕರಣ’ದಡಿ ಜೈಲು ಸೇರಿದ್ದು, ಮಠ ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಹನೂರು ತಾಲೂಕಿನ ಬಂಡಹಳ್ಳಿ ಗ್ರಾಮದ ಸುಂದ್ರಮ್ಮ ಮತ್ತು ಮಹದೇವಪ್ಪ ದಂಪತಿ ಪುತ್ರ ನಾಗೇಂದ್ರ ಅವರಿಗೆ ವಹಿಸಲಾಗಿದೆ.