

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಭದ್ರತೆ ಮತ್ತೊಮ್ಮೆ ಉಲ್ಲಂಘನೆಯಾಗಿದೆ. ಯುವಕನೊಬ್ಬ ಸೆ.18ರ ಮಧ್ಯರಾತ್ರಿ 12 ಗಂಟೆಯಲ್ಲಿ 'ಭಾಯಿಜಾನ್' ಕಾರನ್ನು ಬೈಕ್ ನಲ್ಲಿ ಬಹುದೂರದವರೆಗೆ ಹಿಂಬಾಲಿಸಿದ್ದಾನೆ. ನಂತರ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬುಧವಾರ ರಾತ್ರಿ 12.25ರ ಸುಮಾರಿಗೆ ಸಲ್ಮಾನ್ ಖಾನ್ ಬೆಂಗಾವಲು ಪಡೆ ಸಮೇತ ಮುಂಬೈನ ಮೆಹಬೂಬ್ ಸ್ಟುಡಿಯೋ ಮೂಲಕ ಹಾದು ಹೋಗುತ್ತಿದ್ದರು. ಆಗ ಮೋಟಾರ್ ಸೈಕಲ್‌ನಲ್ಲಿ ವೇಗವಾಗಿ ಬಂದ ವ್ಯಕ್ತಿ ಸಲ್ಮಾನ್ ಕಾರಿನ ಸಮೀಪಕ್ಕೆ ಬಂದಿದ್ದಾನೆ. ಸಲ್ಮಾನ್ ಖಾನ್ ಅವರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಪದೇ ಪದೇ ಹಾರ್ನ್ ಮಾಡಿ ದೂರ ಹೋಗುವಂತೆ ಕೇಳಿಕೊಂಡಿದ್ದಾರೆ. ಆದರೆ ಸಲ್ಮಾನ್ ಕಾರಿನೊಂದಿಗೆ ಆತ ತನ್ನ ಮೋಟಾರ್ ಸೈಕಲ್ ಓಡಿಸುವುದನ್ನು ಮುಂದುವರೆಸಿದ್ದಾನೆ.
ಯುವಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮುಂಬೈನ ಬಾಂದ್ರಾ ನಿವಾಸಿ, ಕಾಲೇಜು ವಿದ್ಯಾರ್ಥಿ ಮೊಹಿಯುದ್ದೀನ್ ಎಂದು ತಿಳಿಸಿದ್ದಾನೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 125, ಮತ್ತು ಸೆಕ್ಷನ್ 281 ಅಡಿಯಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.