‘ಸಿಕಂದರ್’ ಟೀಸರ್ ಬಿಡುಗಡೆ ಮುಂದೂಡಿಕೆ; ನಿರ್ಮಾಪಕರ ನಿರ್ಧಾರದ ಹಿಂದಿನ ಕಾರಣ ಹೀಗಿದೆ.. | Sikandar Reaser Release Postponed

Untitled design (27)
Published on

ಮುಂಬೈ: ಬಾಲಿವುಡ್​ ಭಾಯಿಜಾನ್​ ಸಲ್ಮಾನ್ ಖಾನ್ ತಮ್ಮ 'ಸಿಕಂದರ್' ಸಿನಿಮಾವನ್ನು ಘೋಷಿಸಿದಾಗಿನಿಂದ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಸಲ್ಮಾನ್ ಖಾನ್ ಅವರ 59ನೇ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಉಡುಗೊರೆಯಾಗಿ ಈ ಸಿನಿಮಾದ ಟೀಸರ್​ ಅನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೀಗ ಟೀಸರ್​​ ಬಿಡುಗಡೆಯನ್ನು ಮುಂದೂಡಲಾಗಿದೆ (Sikandar Reaser Release Postponed).

ದೇಶದ ಆರ್ಥಿಕತೆಯನ್ನು ಸುಧಾರಿಸಿದ ಹಿರಿಯ ರಾಜಕಾರಣಿ ಮನಮೋಹನ್ ಸಿಂಗ್ ಅವರು ವಿಧಿವಶರಾಗಿದ್ದಾರೆ. ಇಡೀ ದೇಶವೇ ದುಃಖದಲ್ಲಿ ಮುಳುಗಿದ್ದು, ಗಣ್ಯಾತೀಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿ ಸಿಕಂದರ್​ ಸಿನಿಮಾದ ಟೀಸರ್​​ ಬಿಡುಗಡೆಯನ್ನು ಮುಂದೂಡಿರುವುದಾಗಿ ಚಿತ್ರದ ನಿರ್ಮಾಪಕ ಸಾಜಿದ್​​ ನಾಡಿಯಾಡ್​ವಾಲಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಮ್ಮ ಗೌರವಾನ್ವಿತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಿ ಅವರ ನಿಧನದ ದೃಷ್ಟಿಯಿಂದ ಸಿಕಂದರ್ ಚಿತ್ರದ ಟೀಸರ್ ಬಿಡುಗಡೆಯನ್ನು ಡಿಸೆಂಬರ್ 28 ರಂದು ರಾತ್ರಿ 11:07 ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಲು ನಾವು ವಿಷಾದಿಸುತ್ತೇವೆ. ನಮ್ಮ ಆಲೋಚನೆಗಳು ರಾಷ್ಟ್ರದೊಂದಿಗೆ ಇವೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು ಎಂದು ನಿರ್ಮಾಪಕ ಸಾಜಿದ್​​ ನಾಡಿಯಾಡ್​ವಾಲಾ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಸಿಕಂದರ್‌ ಸಿನಿಮಾದಲ್ಲಿನ ಸಲ್ಮಾನ್ ಖಾನ್ ಅವರ ಫಸ್ಟ್ ಲುಕ್ ಡಿಸೆಂಬರ್ 26ರಂದು ಬಿಡುಗಡೆಯಾಯಿತು. ಕೈಯಲ್ಲಿ ಆಯುಧ ಹಿಡಿದಿರುವ ಸಲ್ಲು ಮಿಯಾನ್ ಲುಕ್ ಮನಸೆಳೆಯುವಂತಿತ್ತು. ನಟನ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 27 ರಂದು ಟೀಸರ್ ಬಿಡುಗಡೆಯಾಗಲಿದೆ ಎಂದು ಈ ಪೋಸ್ಟರ್‌ನೊಂದಿಗೆ ಬಹಿರಂಗಪಡಿಸಲಾಗಿದೆ. ಆದರೆ ಇದು ಈಗ ಆಗುವುದಿಲ್ಲ.

ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಸಿಕಂದರ್ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಸೌತ್‌ ಬ್ಯೂಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಸಲ್ಮಾನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಕಾಜಲ್ ಅಗರ್ವಾಲ್, ಪ್ರತೀಕ್ ಪಾಟೀಲ್ ಬಬ್ಬರ್ ಮತ್ತು ಶರ್ಮನ್ ಜೋಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಈದ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net