ಹಲವು ಬಾಲಿವುಡ್ ನಟ-ನಟಿಯರು ಹಿಂದಿ ಚಿತ್ರರಂಗದ ಜತೆಗೆ ಅಂತಾರಾಷ್ಟ್ರೀಯ, ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದಾರೆ. ಅನಿಲ್ ಕಪೂರ್, ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿ ಹಲವರು ಜಾಗತಿಕವಾಗಿಯೂ ಗಮನ ಸೆಳೆದಿದ್ದಾರೆ. ಇದೀಗ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಕೂಡ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದು, ಅವರು ನಟಿಸಿರುವ ‘7 ಡಾಗ್ಸ್’ ಎಂಬ ಅಂತಾರಾಷ್ಟ್ರೀಯ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಕಳೆದ ವರ್ಷ ಸಂಜಯ್, ಸಲ್ಮಾನ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಚಿತ್ರೀಕರಣದ ಫೋಟೋಗಳು ಕೂಡ ವೈರಲ್ ಆಗಿದ್ದವು. ಇದೀಗ ಆ ಸುದ್ದಿ ಖಚಿತವಾಗಿದ್ದು, ಅದು ಹಾಲಿವುಡ್ ಅಲ್ಲ, ಅಂತಾರಾಷ್ಟ್ರೀಯ ಸಿನಿಮಾ ಎಂಬುದು ದೃಢವಾಗಿದೆ. ‘7 ಡಾಗ್ಸ್’ ಕಾಮಿಡಿ ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ಸಲ್ಮಾನ್, ಸಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿಲ್ ಅಲ್ ಅರಬಿ, ಬಿಲಾಲ್ ಫಲ್ಹಾ ಇಬ್ಬರು ಜಂಟಿಯಾಗಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರತಂಡ ರಿಲೀಸ್ ಮಾಡಿದ ಟ್ರೇಲರ್‌ನಲ್ಲೂ ಬಾಲಿವುಡ್ ನಟರು ಮಿಂಚಿದ್ದಾರೆ. ಹಾಗೆಯೇ, ಇಬ್ಬರು ಬಾಲಿವುಡ್ ಸ್ಟಾರ್‌ಗಳು ಸಿನಿಮಾ ಸೆಟ್‌ನಲ್ಲಿರುವ ಫೋಟೋಗಳು ಕೂಡ ವೈರಲ್ ಆಗಿದ್ದು ಅವರ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನು, ಇದೇ ಮೇ 27ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. 2014ರಲ್ಲಿ ತೆರೆಕಂಡಿದ್ದ ‘ಡಾ.ಕ್ಯಾಬಿ’ ಎಂಬ ಅಂತಾರಾಷ್ಟ್ರೀಯ ಚಿತ್ರವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದರು. ಇದೀಗ ‘7 ಡಾಗ್ಸ್’ ಮೂಲಕ ನಟನೆಗೂ ಮುಂದಾಗುತ್ತಿದ್ದಾರೆ. ಇನ್ನು ಸಂಜಯ್ ದತ್‌ಗೆ ಇದು ಮೊದಲನೇ ಅಂತಾರಾಷ್ಟ್ರೀಯ ಸಿನಿಮಾ. -ಏಜೆನ್ಸೀಸ್