

Film| ನಟ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಇದೇ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಿತ್ರವನ್ನು ಎ.ಆರ್.ಮುರುಗದಾಸ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಇದೀಗ ಎಲ್ಲೆಡೆ ಸಿಕಂದರ್ ಸದ್ದು ಜೋರಾಗಿದ್ದು, ಈಗಾಗಲೇ 60,000 ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಮುಂಗಡ ಟಿಕೆಟ್ ಬುಕಿಂಗ್ ಆರಂಭವಾದ ಒಂದೇ ದಿನದಲ್ಲಿ 1.91 ಕೋಟಿ ರೂ.ಗಳು ಸಂಗ್ರಹವಾಗಿದೆ. ಒಂದೇ ದಿನಕ್ಕೆ ಭಾರತದಲ್ಲಿ 60,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಬ್ಲಾಕ್ ಸೀಟುಗಳನ್ನು ಲೆಕ್ಕ ಹಾಕಿದರೆ ಈ ಚಿತ್ರತಂಡ 6.15 ಕೋಟಿ ರೂ.ಗಳ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಈ ಚಿತ್ರವು ಭಾರತದಾದ್ಯಂತ ಸುಮಾರು 9,110 ಪ್ರದರ್ಶನಗಳನ್ನು ಕಾಣಲಿದೆ.
ಬಾಕ್ಸ್ ಆಫೀಸ್‌ನಲ್ಲಿ ಸಿಕಂದರ್ ಸಿನಿಮಾ, ಮೋಹನ್ ಲಾಲ್ ಅವರ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರವಾದ L2: ಎಂಪೂರನ್ ಚಿತ್ರದ ಜೊತೆ ಜಿದ್ದಾಜಿದ್ದಿ ನಡೆಸಲಿದೆ. L2: ಎಂಪೂರನ್ ಚಿತ್ರ ಇದೇ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ. ಸಿಕಂದರ್ ಬಿಡುಗಡೆಗೆ ಮೊದಲೇ L2: ಎಂಪೂರನ್ 4.5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, 9.02 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರ ಭಾರತದಾದ್ಯಂತ 8748 ಪ್ರದರ್ಶನಗಳನ್ನು ನೀಡಲಿದೆ. ಇನ್ನೂ L2: ಎಂಪೂರನ್ ಮತ್ತು ಸಿಕಂದರ್ ಎರಡೂ ಚಿತ್ರಗಳು ಒಂದೇ ಬಾರಿ ಬಿಡುಗಡೆಯಾಗ್ತಿರೋ ಹಿನ್ನಲೆ ನಿರ್ದೇಶಕ ಪೃಥ್ವಿರಾಜ್ ಪ್ರತಿಕ್ರಿಯಿಸಿದ್ದು, ಎರಡೂ ಚಿತ್ರಗಳ ನಡುವೆ ಯಾವುದೇ ಸ್ಪರ್ಧೆ ಇರುವುದಿಲ್ಲ ಎಂದಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿರಾಜ್ ಅವರು ಸಲ್ಮಾನ್ ಖಾನ್ ದೇಶದ ಅತಿದೊಡ್ಡ ನಟರಲ್ಲಿ ಒಬ್ಬರು ಆದರೆ ಎರಡು ಚಿತ್ರಗಳ ನಡುವೆ ಯಾವುದೇ ಸ್ಪರ್ಧೆ ಇರೋದಿಲ್ಲ. ನಮ್ಮ ಸಿನಿಮಾ ಕೂಡ ಬ್ಲಾಕ್ಬಸ್ಟರ್ ಆಗಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ನೀವು ಬೆಳಿಗ್ಗೆ 11 ಗಂಟೆಗೆ L2: ಎಂಪೂರನ್ ಮತ್ತು ಮಧ್ಯಾಹ್ನ 1 ಗಂಟೆಗೆ ಸಿಕಂದರ್ ನೋಡಿದರೆ ನನಗೆ ಸಂತೋಷ ಎಂದಿದ್ದಾರೆ.