ನೋಂದಣಿ ಸರ್ಟಿಫಿಕೇಟ್ ದಂಧೆ; 250 ಸಂಸ್ಥೆಗಳ ವಿರುದ್ಧ ಕೇಸ್

Fake-document-fir
Published on

ಬೆಂಗಳೂರು: ಇ-ಕಾರ್ಮಿಕ ತಂತ್ರಾಂಶ ದುರ್ಬಳಕೆ ಮಾಡಿಕೊಂಡು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಸರ್ಟಿಫಿಕೇಟ್‌ಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಮೂಲಕ ಬ್ಯಾಂಕ್‌ಗಳಿಂದ ಲಕ್ಷಾಂತರ ರೂ. ಸಾಲ ಪಡೆದ ಆರೋಪದಲ್ಲಿ 250 ಅಂಗಡಿ ಮಾಲೀಕರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ದಂಧೆ ಹಾಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವ ಬಗ್ಗೆ ಸೆ.14ರಂದು ‘ವಿಜಯವಾಣಿ’ ಮುಖಪುಟದಲ್ಲಿ ‘ನೋಂದಣಿ ಸರ್ಟಿಫಿಕೇಟ್ ಸೇಲ್’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈಗ ಕಾರ್ಮಿಕ ಇಲಾಖೆ ಹಿರಿಯ ಕಾರ್ಮಿಕ ನಿರೀಕ್ಷಕ ಆರ್. ರವಿಕುಮಾರ್ ದೂರು ಕೊಟ್ಟಿದ್ದು, ಎ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜ್ಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಪ್ರತಿಯೊಂದು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕಾರ್ಮಿಕ ಇಲಾಖೆಯ ಇ-ಕಾರ್ಮಿಕ ಆನ್‌ಲೈನ್‌ನಲ್ಲಿ ನಿಗದಿತ ಅರ್ಜಿ ಮತ್ತು ಶುಲ್ಕ ಪಾವತಿಸಿ ನೋಂದಾಯಿಸಿ ಪ್ರಮಾಣ ಪತ್ರ ಪಡೆಯಬೇಕು. ಒಮ್ಮೆ ನೋಂದಣಿ ಮಾಡಿಕೊಂಡರೆ 5 ವರ್ಷದ ಅವಧಿಗೆ ಅನ್ವಯ ಆಗಲಿದೆ. ನಂತರ ನವೀಕರಣ ಮಾಡಿಕೊಳ್ಳಬೇಕು. ಆದರೆ, 250ಕ್ಕೂ ಅಧಿಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ನೋಂದಣಿ ಪತ್ರ ನಮೂನೆ-ಸಿ ಪತ್ರವನ್ನು ದುರ್ಬಳಕೆ ಮಾಡಿಕೊಂಡಿವೆ.

ಅಕ್ರಮವಾಗಿ ನೋಂದಣಿ ಸಂಖ್ಯೆ, ಚಲನ್ ದಿನಾಂಕ ಮತ್ತು ನೋಂದಣಿ ಅವಧಿಯ ದಿನಾಂಕಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ಸರ್ಕಾರಿ ದಾಖಲೆ ತಿದ್ದುಪಡಿ ಮಾಡಿದ್ದಾರೆ. ಈ ಅಕ್ರಮದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಶೀಶಲ್ ಮತ್ತು ಸಹಚರರಾದ ರವಿನಾಯಕ್ ಇತರರ ಕೈವಾಡ ಕಂಡುಬಂದಿದೆ. ನೋಂದಣಿ ಪ್ರಮಾಣ ಪತ್ರಗಳನ್ನು ತಿದ್ದುಪಡಿ ಮಾಡಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ರವಿಕುಮಾರ್ ಆರೋಪಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net