ಆರೋಪ ಮುಕ್ತರಾದರೂ ಸಬ್ ರಿಜಿಸ್ಟ್ರಾರ್‌ಗಳ ವೇತನ ಬಡ್ತಿಗೆ ಕತ್ತರಿ

SUBREgistr
Published on

ಬೆಂಗಳೂರು: ರೆವಿನ್ಯೂ ಸೈಟ್‌ಗಳನ್ನು ನೋಂದಣಿ ಮಾಡಿದ ಆರೋಪ ಸಂಬಂಧ ನಿವೃತ್ತ ನ್ಯಾಯಾಧೀಶರ ಆಯೋಗ ಕಾನೂನು ಉಲ್ಲಂಘನೆ ಆಗಿಲ್ಲವೆಂದು ವರದಿ ನೀಡಿದರೂ ಸಬ್ ರಿಜಿಸ್ಟ್ರಾರ್‌ಗಳಿಗೆ ವೇತನ ಬಡ್ತಿ ತಡೆಹಿಡಿಯಲಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ 2020ರ ಏಪ್ರಿಲ್ 1 ರಿಂದ 2021ರ ಸೆಪ್ಟೆಂಬರ್ 22ರ ನಡುವೆ ಸರ್ಕಾರದ ಸುತ್ತೋಲೆ ಉಲ್ಲಂಸಿ ರೆವಿನ್ಯೂ ಸೈಟ್‌ಗಳ ನೋಂದಣಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ನಿವೃತ್ತ ನ್ಯಾಯಾಧೀಶರ ಮತ್ತು ಜಿಲ್ಲಾ ನೋಂದಣಾಧಿಕಾರಿಗಳ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆರೋಪಿತ 44 ಸಬ್ ರಿಜಿಸ್ಟ್ರಾರ್‌ಗಳು ಸುತ್ತೋಲೆ ಉಲ್ಲಂಘನೆ ಎನ್ನಲಾದ 39,973 ದಸ್ತಾವೇಜುಗಳನ್ನು ಆಯೋಗ ಪರಿಶೀಲಿಸಿತ್ತು. ಈ ವೇಳೆ ನಮೂನೆ 9 ಮತ್ತು 11ಎ ಅಥವಾ 11ಬಿ ತಂತ್ರಾಂಶದಿಂದ ಪಡೆಯದಿರುವುದು ಕಾನೂನು ಉಲ್ಲಂಘನೆ ಆಗಿಲ್ಲ. ಮೇಲಾಗಿ ದಸ್ತಾವೇಜುಗಳ ನೋಂದಣಿಯಿಂದಾಗಿ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ನಷ್ಟ ಉಂಟಾಗಿಲ್ಲ.

ಜತೆಗೆ ದಸ್ತಾವೇಜುಗಳಿಗೆ ಸಂಬಂಧಪಟ್ಟ ಪಕ್ಷಕಾರರು ಸಬ್ ರಿಜಿಸ್ಟ್ರಾರ್‌ಗಳ ಮೇಲೆ ದೂರು ನೀಡಿಲ್ಲ. ಆದ್ದರಿಂದ ಉಪ ನೋಂದಣಾಧಿಕಾರಿಗಳ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಹಿರಿಯ ಸಬ್ ರಿಜಿಸ್ಟ್ರಾರ್‌ವೊಬ್ಬರಿಗೆ ಆರೋಪದಿಂದ ಮುಕ್ತಿ ನೀಡಿದ್ದರು. ಉಳಿದ ಸಬ್ ರಿಜಿಸ್ಟ್ರಾರ್‌ಗಳಿಗೂ ಅನ್ವಯ ಆಗಲಿದೆ ಎಂದು 2023ರ ಸೆಪ್ಟೆಂಬರ್ 26ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಇದೀಗ ಅಕ್ಟೋಬರ್ 14ರಂದು 44 ಅಧಿಕಾರಿಗಳ ಪೈಕಿ 38 ಹಿರಿಯ ಸಬ್ ರಿಜಿಸ್ಟ್ರಾರ್‌ಗಳು ಮತ್ತು ಸಬ್ ರಿಜಿಸ್ಟ್ರಾರ್‌ಗಳಿಗೆ ಕರ್ನಾಟಕ ಸಿವಿಲ್ ಸೇವಾ ಕಾಯ್ದೆ ಚಲಾಯಿಸಿ 2 ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವ ಮೂಲಕ ದಂಡ ವಿಧಿಸಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸಬ್ ರಿಜಿಸ್ಟ್ರಾರ್‌ಗಳು ಕಾನೂನು ಉಲ್ಲಂಸಿಲ್ಲವೆಂದು ಆಯೋಗ ವರದಿ ನೀಡಿದರೂ ಮತ್ತು ಸರ್ಕಾರ ಈ ಹಿಂದೆಯೇ ಆ ವರದಿಯನ್ನು ಒಪ್ಪಿದ್ದರೂ ಏಕಾಏಕಿ ವೇತನ ಬಡ್ತಿ ಕಡಿತ ಮಾಡಿರುವುದು ಸರಿಯಲ್ಲವೆಂದು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net