ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅಮೆರಿಕ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಲಾನ್​ ಮಸ್ಕ್​! Elon Musk

Elon Musk
Published on

Elon Musk : ಭ್ರಷ್ಟಾಚಾರವನ್ನು ನಿಗ್ರಹಿಸಲು ಟೆಸ್ಲಾ ಗ್ರೂಪ್ ಸಂಸ್ಥಾಪಕ ಹಾಗೂ ವಿಶ್ವದ ನಂಬರ್​ 1 ಶ್ರೀಮಂತ ಎಲಾನ್ ಮಸ್ಕ್ ಹೊಸ ಮಾರ್ಗವೊಂದನ್ನು ಅಮೆರಿಕ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದಾರೆ.

ಯುಎಸ್ ಕಾಂಗ್ರೆಸ್ ಸದಸ್ಯರಿಗೆ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ನೀಡಬೇಕೆಂದು ಎಲಾನ್ ಮಸ್ಕ್ ನಿನ್ನೆ (ಫೆ.27) ಸೂಚನೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಎಲಾನ್ ಮಸ್ಕ್ ಅವರಿಗೆ ಸರ್ಕಾರಿ ದಕ್ಷತಾ ಇಲಾಖೆ (DOGE)ಯಲ್ಲಿ ನಿರ್ಣಾಯಕ ಜವಾಬ್ದಾರಿಗಳನ್ನು ನೀಡಲಾಗಿದೆ. ಈ ಇಲಾಖೆಯನ್ನು ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಲು ರಚಿಸಲಾಗಿದೆ. ಹೀಗಾಗಿ ಅನೇಕ ಉದ್ಯೋಗಗಳನ್ನು ಸಹ ಕಡಿತಗೊಳಿಸಲಾಗುತ್ತಿದೆ. ಇದರ ನಡುವೆ ದಕ್ಷತಾ ಇಲಾಖೆ ವಿರುದ್ಧ ಅನೇಕರು ಅಸಮಧಾನ ಸಹ ಹೊರಹಾಕುತ್ತಿದ್ದಾರೆ.

ಸಂಬಳ ಏರಿಕೆ ಕ್ರಮವು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಯುಎಸ್ ಕಾಂಗ್ರೆಸ್ ಸದಸ್ಯರಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ, ಇದು ಸಾರ್ವಜನಿಕರಿಗೆ 1000 ಪಟ್ಟು ಹೆಚ್ಚು ದುಬಾರಿಯಾಗುತ್ತದೆ ಎಂದು ಮಸ್ಕ್​​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಶಾಸಕರು ವೇತನ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹೊಸ ನಿರ್ಧಾರವು ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.

ಬುಧವಾರ ನಡೆದ ಡೊನಾಲ್ಡ್​ ಟ್ರಂಪ್ ಅವರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಎಲಾನ್ ಮಸ್ಕ್, ದಕ್ಷತಾ ಇಲಾಖೆಯಲ್ಲಿ ನಾವು ತೆಗೆದುಕೊಂಡ ಕ್ರಮಗಳಿಂದಾಗಿ ನಮಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದರು. ಅಲ್ಲದೆ, ಕಳೆದ ವಾರ ನೀವುಗಳು ಯಾವ ಕೆಲಸ ಮಾಡಿದ್ದೀರಿ ಎಂದು ವಿವರಿಸುವಂತೆ ಸರ್ಕಾರಿ ಉದ್ಯೋಗಿಗಳಿಗೆ ಎಲಾನ್​ ಮಸ್ಕ್​ ಇಮೇಲ್ ಕಳುಹಿಸಿದ್ದು, ಇದರ ವಿರುದ್ಧವಾಗಿ ದಕ್ಷತಾ ಇಲಾಖೆಯಲ್ಲೇ ಅಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಈ ದಕ್ಷತಾ ಇಲಾಖೆ ಅಮೆರಿಕದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ.

ದಕ್ಷತಾ ಇಲಾಖೆಯ ವೆಚ್ಚ ಕಡಿತದಲ್ಲಿ ಕೆಲವು ತಪ್ಪುಗಳಿವೆ ಎಂದು ಸ್ವತಃ ಎಲಾನ್ ಮಸ್ಕ್ ಕೂಡ ಒಪ್ಪಿಕೊಂಡಿದ್ದಾರೆ. ಎಬೋಲಾ ತಡೆಗಟ್ಟುವಿಕೆಗಾಗಿ ಹಣಕಾಸಿನ ನೆರವು ಸ್ಥಗಿತಗೊಳಿಸಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ. ಎಬೋಲಾ ತಡೆಗಟ್ಟುವಿಕೆಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಅರಿತುಕೊಂಡಾಗ, ಅದನ್ನು ಪುನರಾರಂಭಿಸಿರುವುದಾಗಿ ಮಸ್ಕ್​ ಹೇಳಿದರು. ಮಸ್ಕ್ ನಂತರ ಮಾತನಾಡಿದ ಟ್ರಂಪ್, ತಮ್ಮ ಕಾರ್ಯಗಳಿಂದ ಯಾರಾದರೂ ಅತೃಪ್ತರಾಗಿದ್ದಾರೆಯೇ ಎಂದು ಕೇಳಿದರು. ಒಂದು ವೇಳೆ ಅತೃಪ್ತರಾಗಿದ್ದರೆ, ಅವರನ್ನು ಇಲ್ಲಿಂದ ಹೊರಹಾಕುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದು ಸಹ ಚರ್ಚೆಗೀಡಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net