ತುಟ್ಟಿಯಾಗುತ್ತಿರುವ ರಾಜಕಾರಣ, ಕುಸಿಯುತ್ತಿರುವ ಮೌಲ್ಯ| ಅರವಿಂದ ಬೆಲ್ಲದ ಅವರ ಅಂಕಣ

25 Nela ph 05 Devotees Line
Published on
ದೇಶದಲ್ಲಿ ಜಾತಿಯನ್ನೂ ಮೀರಿ ದುಡ್ಡು ಈಗ ಚುನಾವಣಾ ವ್ಯವಸ್ಥೆಯನ್ನು ಅಕ್ಷರಶಃ ಆಳಲಾರಂಭಿಸಿದೆ. ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆ ಬರುವಷ್ಟರಲ್ಲಿ ವೆಚ್ಚಗಳು ದ್ವಿಗುಣವಾಗುತ್ತಿದೆ. ಹೀಗಾಗಿ ಚುನಾವಣಾ ವ್ಯವಸ್ಥೆ ಸುಧಾರಣೆ ಜನರಿಗಿಂತಲೂ ಜನಪ್ರತಿನಿಧಿಯಾಗಬಯಸುವವರಿಗೆ ತುರ್ತಾಗಿ ಬೇಕು.

ಗ್ರಾಮ ಪಂಚಾಯಿತಿ ಚುನಾವಣೆ ಕಾಲವಿದು. ರಾಜ್ಯದಲ್ಲಿ 5000ಕ್ಕಿಂತಲೂ ಹೆಚ್ಚು ಪಂಚಾಯಿತಿಗಳಿಂದ 90 ಸಾವಿರಕ್ಕೂ ಮೇಲ್ಪಟ್ಟು ಸದಸ್ಯರನ್ನು ಆಯ್ಕೆ ಮಾಡುವುದಕ್ಕಾಗಿ ಚುನಾವಣೆ ನಡೆದಿದೆ. ರಾಜ್ಯದ ಯಾವುದೇ ಜಿಲ್ಲೆಯ ಯಾವ ಹಳ್ಳಿಗೆ ಹೋದರೂ ‘ಪ್ರಜಾಪ್ರಭುತ್ವದ ಪಂಚಾಂಗ’ ಎಂದು ಕರೆಯುವ ಪಂಚಾಯಿತಿ ಮಟ್ಟದಲ್ಲಿ ಪ್ರಜಾಪ್ರಭುತ್ವದ ನರ್ತನ (ಡಾನ್ಸ್ ಆಫ್ ಡೆಮಾಕ್ರಸಿ) ನಡೆದಿದೆ. ಎಷ್ಟೆಂದರೂ ಭಾರತದಲ್ಲಿ ಚುನಾವಣೆ ನಡೆಯುವುದು ಊರಹಬ್ಬದಂತೇ! ಈ ಸಂಭ್ರಮ, ಸೋಜಿಗ ಬಹುಶಃ ಪ್ರಪಂಚದ ಇನ್ಯಾವ ರಾಷ್ಟ್ರದಲ್ಲಿ ಕಾಣ ಸಿಗುವುದು ಅನುಮಾನ. ಆದರೆ... ಈ ಚುನಾವಣೆಯೂ ಈಗ ತುಟ್ಟಿಯಾಗುತ್ತಿದೆ.

ನೀವೆಲ್ಲ ಗಮನಿಸಿರಬಹುದು. ಕೆಲ ದಿನಗಳ ಹಿಂದೆ ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಪಟ್ಟಂತೆ ಎರಡು ವರದಿ ಪ್ರಕಟವಾದವು. ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರ ಎಲ್ಲ ಸ್ಥಾನಗಳನ್ನು 1.5 ಕೋಟಿ ರೂ.ಗೆ ಹರಾಜು ಕರೆಯಲಾಯಿತು. ಸದಸ್ಯತ್ವವನ್ನು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳಲಾಯಿತು. ಬಳ್ಳಾರಿ ಜಿಲ್ಲೆಯಲ್ಲೂ ಇದೇ ರೀತಿಯ ಪ್ರಕರಣ ನಡೆಯಿತು. ಇದು ಚುನಾವಣಾ ನಿಯಮಗಳಿಗೆ ಸಂಪೂರ್ಣ ವಿರುದ್ಧ. ತೀರಾ ಪಂಚಾಯಿತಿ ಹಂತದಲ್ಲೇ ನಡೆಯುವ ಇಂಥ ಘಟನೆಗಳು ಭಾರತದ ಚುನಾವಣಾ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲ ಎಂಬುದನ್ನು ತೋರಿಸಿದರೆ, ಈ ವ್ಯವಸ್ಥೆಯಲ್ಲೂ ನುಸುಳುತ್ತಿರುವ ಹಣದ ಪ್ರಭಾವ ಆತಂಕವನ್ನು ಸೃಷ್ಟಿಸುತ್ತಿದೆ.

ಹೌದು. ನಾನ್ನೊಬ್ಬ ಶಾಸಕನಾಗಿ ಈ ಮಾತನ್ನು ಹೇಳುವುದು ಕೆಲವರ ದೃಷ್ಟಿಯಲ್ಲಿ ಆಕ್ಷೇಪಾರ್ಹವೆನ್ನಿಸಬಹುದು. ವ್ಯವಸ್ಥೆಯನ್ನು ಸುಧಾರಿಸಲಾಗದ ಹತಾಶೆಯ ಹಳಹಳಿಕೆ ಎಂದು ವ್ಯಾಖ್ಯಾನಿಸಲೂಬಹುದು. ಪಂಚಾಯಿತಿ ಬಗ್ಗೆ ಮಾತನಾಡುವುದಕ್ಕೆ ಮುನ್ನ ಎಂಎಲ್​ಎ ಚುನಾವಣೆ ಹೇಗೆ ನಡೆಸುತ್ತೀರಿ ಎಂದು ಸ್ವಲ್ಪ ಗಮನಿಸಿ. ಉಪಚುನಾವಣೆಗೆ ನೀವುಗಳು ಚೆಲ್ಲುವ ಹಣದಲ್ಲಿ ಒಂದು ಜಿಲ್ಲೆಗೆ ಸಂಪೂರ್ಣ ನಾಗರಿಕ ಸೌಲಭ್ಯ ನೀಡಬಹುದಲ್ಲ ಸ್ವಾಮಿ ಎಂದು ಬಿಗುವಾಗಿ ಪ್ರಶ್ನೆಯನ್ನೂ ಮಾಡಬಹುದು. ಈ ಎಲ್ಲ ಪ್ರಶ್ನೆಗಳಿಗೆ ಮೇಲಿನ ದೃಷ್ಟಾಂತಗಳು ಕೇವಲ ಉದಾಹರಣೆಯಾದರೂ ಒಟ್ಟಾರೆಯಾಗಿ ರಾಜಕೀಯ ವ್ಯವಸ್ಥೆ ದುಬಾರಿಯಾಗುತ್ತಿದೆ. ಇದು ತರವಲ್ಲ ಎಂಬುದನ್ನು ಪ್ರತಿಪಾದಿಸುವುದೇ ಈ ಲೇಖನದ ಉದ್ದೇಶ. ಜತೆಗೆ ಈ ಎಲ್ಲ ಸಮಸ್ಯೆಗಳಿಗೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ‘ಒಂದು ದೇಶ, ಒಂದು ಚುನಾವಣೆ’ಯಂಥ ಕಲ್ಪನೆಗಳು ಪರಿಹಾರ ನೀಡಬಹುದೆಂಬ ನಿರೀಕ್ಷೆ- ಪ್ರತೀಕ್ಷೆ ನನ್ನದು.

ಹಾಗಾದರೆ ದೇಶದಲ್ಲಿ ಚುನಾವಣಾ ವ್ಯವಸ್ಥೆ ಇಷ್ಟು ತುಟ್ಟಿಯಾಗಲು ಕಾರಣವೇನೆಂಬುದು ಜಟಿಲವಾದ ಪ್ರಶ್ನೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳು ಎಂದು ನಾವು ಹೇಳುತ್ತೇವೆಯಾದರೂ, ಕಾರ್ಯಾಂಗ ಹಾಗೂ ನ್ಯಾಯಾಂಗ ಸ್ವಾತಂತ್ರ್ಯ ಪೂರ್ವದಿಂಲೂ ಒಂದು ಗಟ್ಟಿ ಅನುಕರಣ ವ್ಯವಸ್ಥೆಯಿತ್ತು. ಬ್ರಿಟಿಷರು ರೂಪಿಸಿದ ಎಷ್ಟೋ ಪದ್ಧತಿಗಳು ಈ ಎರಡು ವಿಭಾಗಕ್ಕೆ ಈಗಲೂ ಮಾದರಿಯಾಗಿದೆ. ಆದರೆ ಶಾಸಕಾಂಗದ ವಿಚಾರಕ್ಕೆ ಬಂದಾಗ ಈ ಮಾತನ್ನು ಅನ್ವಯಿಸುವುದಕ್ಕೆ ಸಾಧ್ಯವೇ ಇಲ್ಲ. ಬ್ರಿಟಿಷ್ ಆಡಳಿತದ ಕೊನೇ ಹಂತದಲ್ಲಿ ಪ್ರಜಾಪ್ರತಿನಿಧಿ ಸಭೆಗಳ ಪರಿಚಯ ಮಾಡಲಾಯಿತಾದರೂ ಅದು ಸಾಂಕೇತಿಕ ಸ್ವರೂಪದಲ್ಲಿತ್ತು. ಸ್ವಾತಂತ್ರ್ಯ ನಂತರವೇ ಶಾಸಕಾಂಗ ಈಗಿನ ಸ್ವರೂಪದಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ ಜನ್ಮ ತಳೆಯುವಾಗಲೇ ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಜಾತಿ ಹಾಗೂ ಹಣದ ಲೇಪವಾಗಿದ್ದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರ್ದೈವ. ಜಾತಿಯನ್ನೂ ಮೀರಿ ದುಡ್ಡು ಈಗ ಚುನಾವಣಾ ವ್ಯವಸ್ಥೆಯನ್ನು ಅಕ್ಷರಶಃ ಆಳಲಾರಂಭಿಸಿದೆ. ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆ ಬರುವಷ್ಟರಲ್ಲಿ ವೆಚ್ಚಗಳು ದ್ವಿಗುಣವಾಗುತ್ತಿದೆ. ಹೀಗಾಗಿ ಚುನಾವಣಾ ವ್ಯವಸ್ಥೆ ಸುಧಾರಣೆ ಜನರಿಗಿಂತಲೂ ಜನಪ್ರತಿನಿಧಿಯಾಗಬಯಸುವವರಿಗೆ ತುರ್ತಾಗಿ ಬೇಕು.

ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣಾ ಟಿಕೆಟ್ ಅಂತಿಮಗೊಳಿಸುವಾಗಲೇ ವೆಚ್ಚದ ಬಾಬತ್ತು ನೋಡಿಕೊಳ್ಳಲು ಈತ ಶಕ್ತನೇ ಎಂಬ ಪ್ರಶ್ನೆ ಎದುರಾಗುತ್ತದೆ. ವಿನ್ನೆಬಲಿಟಿ (ಗೆಲುವಿನ) ಮಾನದಂಡದ ಪೈಕಿ ಇದೇ ಮೊದಲನೆಯ ಸ್ಥಾನವನ್ನು ಆಕ್ರಮಿಸುತ್ತಿದೆ. ಖರ್ಚುವೆಚ್ಚ ನಿಭಾಯಿಸುವುದಕ್ಕೆ ಪ್ರಾಶಸ್ಱ ಹೆಚ್ಚು. ಹಾಗೆಂದು ರಾಜ್ಯದ ಎಲ್ಲ ಕ್ಷೇತ್ರಗಳ ಶಾಸಕರು ಇದೇ ಮಾನದಂಡದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳುವುದೂ ಪ್ರಜಾಪ್ರಭುತ್ವಕ್ಕೆ ಅಪಚಾರ ತರುವ ಮಾತಾದೀತು. ಕನಿಷ್ಠ ವೆಚ್ಚದಲ್ಲಿ ಜನತೆಯ ಪ್ರೀತಿ-ಗೌರವ ಹಾಗೂ ಘನತೆ ಮೂಲಕವೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವವರು ಸಾಕಷ್ಟಿದ್ದಾರೆ. ಅಂಥವರೂ ಚುನಾವಣೆ ಮುಗಿದ ಬಳಿಕ ಎಲೆಕ್ಷನ್ ಖರ್ಚು ಹೆಚ್ಚುತ್ತಿದೆ ಎಂದು ನಿಟ್ಟುಸಿರು ಬಿಡುವುದನ್ನು ನೋಡಿದ್ದೇವೆ.

ಇಷ್ಟೆಲ್ಲ ಮಾಡಿ ಆಯ್ಕೆಯಾದ ಜನಪ್ರತಿನಿಧಿಳಿಗೆ ಮುಂದಿನ ಚುನಾವಣೆ ಬರುವವರೆಗೂ ಇದಿರಾಗುವುದು ಖರ್ಚು ಮಾತ್ರ. ಕ್ಷೇತ್ರಾಭಿವೃದ್ಧಿ ನಿಧಿಗಾಗಿ ಸರ್ಕಾರ ನೀಡುವ ಹಣಕ್ಕೆ ಕ್ರಿಯಾ ಯೋಜನೆ ಮಾಡಿ ಅನುದಾನ ಬಳಕೆ ಮಾತ್ರ ಮಾಡುತ್ತೇನೆ. ನಿಮ್ಮ ಸಮಸ್ಯೆ ಬಗ್ಗೆ ಶಾಸನಸಭೆಯಲ್ಲಿ ಪ್ರಶ್ನೆ ಮಾಡುತ್ತೇನೆ. ನಿಲುವಳಿ ಸೂಚನೆ ಮಂಡಿಸುತ್ತೇನೆ. ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಶಾಸನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತೇನೆ. ಇದಷ್ಟೇ ನನ್ನ ಕೆಲಸ ಎಂದು ಪ್ರಾಮಾಣಿಕತೆ ಪ್ರದರ್ಶಿಸಿದರೆ, ಶಾಸಕನಾದವ ನಿಜವಾಗಿಯೂ ಮಾಡಬೇಕಾದ ಕೆಲಸಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡರೆ ಆತ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದೇ ಕಷ್ಟ. ಈ ರೀತಿ ಇರುತ್ತೇನೆಂಬ ಜನಪ್ರತಿನಿಧಿ ಕೆಲಸಗಾರ ಅಲ್ಲ ಎಂಬ ಟೀಕೆ ಎದುರಾಗುತ್ತದೆ. ಹಾಗಾದರೆ ಜನಪ್ರತಿನಿಧಿಗಳಿಂದ ಜನ ಬಯಸುವುದು ಪ್ರಾಮಾಣಿಕತೆಯಲ್ಲವೇ? ಉತ್ತರ ಹುಡುಕಿದರೆ ಮತ್ತದೇ ಬೇಸರ.

ಶಾಸಕನಾದವನ ಕರ್ತವ್ಯ. ಇವಿಷ್ಟೇ ಅಲ್ಲ ಎಂಬ ಕಾಲ ಕಳೆದು ಅದೆಷ್ಟೊ ವರ್ಷಗಳಾಗಿವೆ. ಆತನ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕ್ರೀಡಾಕೂಟಕ್ಕೆ, ಮದುವೆ-ನಾಮಕರಣ, ಸಾವು-ನೋವು, ವೈದಕೀಯ ವೆಚ್ಚಗಳಿಗೂ ಬಹುತೇಕ ಕ್ಷೇತ್ರಗಳಲ್ಲಿ ಜನರು ಶಾಸಕನ ಜೇಬು ನೋಡುತ್ತಾರೆ. ಇದಕ್ಕಾಗಿ ಶಾಸನಸಭೆ ಶಾಸಕರಿಗಾಗಿ ನಿಗದಿ ಮಾಡಿದ ಮಾಸಿಕ ವೇತನ ಎಷ್ಟೋ ಸಂದರ್ಭದಲ್ಲಿ ಆತನ ಒಂದು ದಿನದ ಅರ್ಧಗಂಟೆ ಖರ್ಚಿಗೂ ಸಾಲುವುದಿಲ್ಲ. ಶಾಸಕರಿಗೆ ಶಾಸನ ಸಭೆಯಿಂದ ಇಬ್ಬರು ಸಹಾಯಕರನ್ನು ನೀಡಲಾಗುತ್ತದೆಯಾದರೂ, ಕ್ಷೇತ್ರ ಹಾಗೂ ಬೆಂಗಳೂರಿನ ವಿವಿಧ ಕಾರ್ಯಕ್ರಮಗಳ ಫಾಲೋಅಪ್ ನಡೆಸುವುದಕ್ಕೆ 8ರಿಂದ 10 ಸಹಾಯಕರ ಅಗತ್ಯವಿರುತ್ತದೆ. ಇನ್ನು ಶಾಸಕರಿಗೆ ಸರ್ಕಾರದಿಂದ ವಾಹನ ವ್ಯವಸ್ಥೆ ಕಲ್ಪಿಸಿಲ್ಲ. ಅವರು ಬಳಸುವ ಗೂಟದ ಇನ್ನೋವಾ ಕಾರಿಗೆ ಬಾಡಿಗೆ ಕೊಡಬೇಕು. ಆದರೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಸೇರಿ ಜಿಲ್ಲಾ ಹಂತದ ಅಧಿಕಾರಿಗಳ ವೆಚ್ಚಕ್ಕೂ ಸರ್ಕಾರವೇ ಹೊಣೆ ಎಂದರೆ ನಂಬುತ್ತೀರಾ? ಇದು ಶಾಸಕನ ದಿನಚರಿಯ ವೆಚ್ಚ. ಇನ್ನು ಚುನಾವಣೆ ಸಂದರ್ಭದಲ್ಲಿ ನಡೆಯುವ ರೋಡ್ ಶೋ, ಪ್ರಚಾರ ಸಭೆ ಇತ್ಯಾದಿಗಳಿಗ ಬೇರೆಯದೇ ಪಟ್ಟಿ ಇದೆ. ಇಷ್ಟೆಲ್ಲ ನಿಭಾಯಿಸುವ ಶಾಸಕರಿಗೆ ಹಾಗಾದರೆ ಆದಾಯ ಎಲ್ಲಿಂದ? ಇವೆಲ್ಲವೂ ಬಗೆಹರಿಯದ, ಬಹಿರಂಗವಾಗಿ ಉತ್ತರಿಸಲೂ ಆಗದ ಸವಾಲುಗಳು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಗಳ ಖರ್ಚುವೆಚ್ಚದ ಬಗ್ಗೆ ಅನೇಕ ಖಾಸಗಿ ಸಂಸ್ಥೆಗಳು ಪ್ರತಿಬಾರಿಯೂ ಅಧ್ಯಯನ ನಡೆಸುತ್ತಲೇ ಇವೆ. ಈ ವರದಿಗಳನ್ನು ಓದಿದಾಗ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವರದಿಯ ತುಣುಕುಗಳನ್ನು ಆಧರಿಸಿ ನಡೆಸುವ ವಿಶ್ಲೇಷಣೆಗಳು ಜನಪ್ರತಿನಿಧಿಗಳ ಬಗ್ಗೆ ರೇಜಿಗೆ ತರಿಸುವಂಥ ಅಭಿಪ್ರಾಯಗಳನ್ನೇ ರೂಪಿಸುತ್ತಿವೆ. ಅದೇ ಕಾಲಕ್ಕೆ ಜನತೆ ಜನಪ್ರತಿನಿಧಿಗಳಿಂದ ಬಯಸುವ ಬೇಡಿಕೆಗಳ ಪಟ್ಟಿ ಮಾತ್ರ ಹೆಚುತ್ತಲೇ ಇದೆ. ಚುನಾವಣಾ ಸುಧಾರಣಾ ಉಪಕ್ರಮಗಳು ಕೇವಲ ಜನಪ್ರತಿನಿಧಿಗಳು ಚೆಲ್ಲುವ ಹಣಕ್ಕಷ್ಟೇ ಸೀಮಿತವಾಗಿರದೆ ಜನರ ಮನೋಭಾವ ಬದಲಾವಣೆಗೂ ಪೂರಕವಾಗಬೇಕು. ಇದಾಗಬೇಕಿದ್ದರೆ ಹೆಚ್ಚು ಹೆಚ್ಚು ಪ್ರಾಮಾಣಿಕರು, ವಿವಿಧ ಕ್ಷೇತ್ರಗಳ ತಜ್ಞರು ರಾಜಕೀಯ ರಂಗ ಪ್ರವೇಶಿಸಬೇಕು. ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲಿ ಮತದಾರರ ಪಾಲು ಇದೆ ಎಂದಾದಾಗ ಅನಗತ್ಯ ದುಂದು ವೆಚ್ಚಕ್ಕೆ, ಚುನಾವಣಾ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು. ಆದರೆ ಇದೆಲ್ಲ ಸಾಧ್ಯವೇ? ಆಶಾವಾದಿಗಳಾಗಿರೋಣ ಎಂದಷ್ಟೇ ಹೇಳಬಹುದು.

ಈ ಎಲ್ಲದರ ಹಿನ್ನೆಲೆಯಲ್ಲಿ ದೇಶದ ಚುನಾವಣಾ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಿಸಬೇಕಿದೆ. ಚುನಾವಣಾ ಸುಧಾರಣಾ ಕ್ರಮ ರೂಪಿಸುವುದಕ್ಕೆ ವಿಳಂಬವಾದಷ್ಟು ಪಂಚಾಯಿತಿಯಿಂದ ಪಾರ್ಲಿಮೆಂಟ್​ವರೆಗೂ ಹಣದ ಪ್ರಭಾವ ತಪ್ಪಿದ್ದಲ್ಲ. ಆಯೋಗ ಪ್ರತಿಯೊಬ್ಬ ಅಭ್ಯರ್ಥಿಗೆ ನಿಗದಿ ಮಾಡಿರುವ ವೆಚ್ಚ ಕೇವಲ ಅಣಕವಷ್ಟೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ಅತ್ಯಂತ ಪ್ರಸ್ತುತವಾಗಿದೆ.

(ಲೇಖಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net