1025 ಸೇವೆ ಸಕಾಲ ವ್ಯಾಪ್ತಿಗೆ

sakala
Published on

ಬೆಂಗಳೂರು: 2012ರಲ್ಲಿ 11 ಇಲಾಖೆಗಳ 151 ಸೇವೆಗಳೊಂದಿಗೆ ಪ್ರಾರಂಭವಾದ ಸಕಾಲ ಯೋಜನೆ ವ್ಯಾಪ್ತಿಗೆ ಈಗ 98 ಇಲಾಖೆಗಳ 1025 ಸೇವೆಗಳನ್ನು ತರಲಾಗಿದೆ ಎಂದು ಶಿಕ್ಷಣ ಮತ್ತು ಸಕಾಲ ಸಚಿವ ಎಸ್.ಸುರೇಶ್​ಕುಮಾರ್ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಇ ಆಡಳಿತ)ಯಿಂದ ಹಮ್ಮಿಕೊಳ್ಳಲಾಗಿದ್ದ ಸಕಾಲ ಸಪ್ತಾಹ ಉದ್ಘಾಟಿಸಿದ ಅವರು, ಸಕಾಲದಡಿ ಇದುವರೆಗೂ 22,88,81,652 ಅರ್ಜಿಗಳನ್ನು ಸ್ವೀಕರಿಸಿ, 22,82,55,866 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.

ನ.30ರಿಂದ ಡಿ.5ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಗಳಲ್ಲಿ ಹಾಗೂ ಡಿ.7ರಿಂದ 11ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು, ಸಕಾಲ ತಂಡದಿಂದ ಕಚೇರಿಗಳ ಭೇಟಿ ಹಾಗೂ ತಪಾಸಣೆ, ಹೆಲ್ಪ್​ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸಲು ಉದ್ದೇಶಿಸಲಾಗಿದೆ ಎಂದರು. ಮಾಸಿಕ ವಿಶ್ಲೇಷಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ ಮಂಡ್ಯ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡಲಾಗಿದೆ. ಕಡೆ ಸ್ಥಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇದ್ದು, ಮುಂದಿನ ದಿನಗಳಲ್ಲಿ ಸುಧಾರಣೆ ಆಗಬೇಕಿದೆ. ಎಲ್ಲ ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ ನಡೆಸಿ, ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲಿ ತಪಾಸಣೆ ತಂಡವನ್ನು ರಚಿಸಿ ನೋಡೆಲ್ ಅಧಿಕಾರಿ ನೇವಿಸಬೇಕು. ಪ್ರತಿ ಕಚೇರಿಯಲ್ಲಿ ಸಕಾಲದ ಕುರಿತು ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ಸಕಾಲ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಇಲಾಖೆಗಳು ವಿಳಂಬ ಧೋರಣೆ ತೋರಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಕಾಲ ಮಿಷನ್​ನ ಅಪರ ನಿರ್ದೇಶಕರಾದ ಡಾ.ಬಿ.ಆರ್.ಮಮತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗಳಾದ ರಾಜೀವ್ ಚಾವ್ಲಾ, ಸಕಾಲ ಮಿಷನ್​ನ ಯೋಜನಾ ನಿರ್ದೇಶಕರಾದ ವರಪ್ರಸಾದ್ ರೆಡ್ಡಿ, ಆಹಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಕಾರ್ವಿುಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net