ಹಿಂದಿ, ತೆಲುಗಿನಲ್ಲಿಡಜನ್‌ಗೂ ಹೆಚ್ಚು ಸಿನಿಮಾಗಳು, ಮೂರ್ನಾಲ್ಕು ವೆಬ್‌ಸರಣಿಗಳಲ್ಲಿ ನಟಿಸಿರುವ ಸಯ್ಯಮಿ ಖೇರ್ ನಟನೆ ಜತೆ ಜತೆಗೆ ಪರಿಸರ ಕಾಳಜಿ ಹೊಂದಿದ್ದಾರೆ. ಮಹಾನಗರಗಳಲ್ಲಿ ಪರಿಸರಕ್ಕೆ ಧಕ್ಕೆಯಾದಾಗ ಧ್ವನಿ ಎತ್ತುವ ನಟಿಯರಲ್ಲಿ ಅವರು ಓರ್ವರು. ಈ ಹಿಂದೆ ಮುಂಬೈನಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದೆ ಎಂಬ ವರದಿಯನ್ನು ಹಂಚಿಕೊಂಡು, ಎಚ್ಚರಿಕೆ ನೀಡಿದ್ದರು. ಇದೇ 3ರ ಸೈಕಲ್ ದಿನದಂದು ಸ್ವತಃ ಬೈಸಿಕಲ್ ಓಡಿಸಿ, ಪರಿಸರ ಸಂದೇಶ ರವಾನಿಸಿದ್ದರು. ಹೀಗಿರುವಾಗಲೇ, ನಟಿಯ ನಾಸಿಕ್ ಮನೆಯ ಸಮೀಪದ 200 ವರ್ಷಗಳ ಹಳೆಯ ಮರವನ್ನು ತೆರವು ಮಾಡಲಾಗಿದ್ದು, ಇದು ಸಯ್ಯಮಿ ಖೇರ್ ಕೋಪಕ್ಕೆ ಕಾರಣವಾಗಿದೆ. ಕಡಿದ ಮರದ ಫೋಟೋ ಹಂಚಿಕೊಂಡು, ‘ಚಿಕ್ಕವರಿರುವಾಗ ಶಿಕ್ಷಕರು ನಮಗೆ ಮರಗಳ ಪ್ರಾಮುಖ್ಯತೆ ಬಗ್ಗೆ ಪ್ರಬಂಧ ಬರೆಸುವ ಮೂಲಕ ಪರಿಸರ ದಿನವನ್ನು ಆಚರಿಸುತ್ತಿದ್ದರು. ಆದರೆ, ವಯಸ್ಕರ ಶಿಕ್ಷಣದಲ್ಲಿ ಮರಗಳ ಉಳಿಸುವ ಕುರಿತು ಯಾವುದೇ ಪಠ್ಯ ಇಲ್ಲವೇ? 200 ವರ್ಷದಷ್ಟು ಹಳೆಯ ಮರಗಳನ್ನು ಕಡಿಯುವುದು ಒಳ್ಳೆಯದೇ? ಮರ ಕಡಿದ ಸ್ಥಳದಲ್ಲಿಯೇ ಹೊಸ ಕಚೇರಿ ಆರಂಭಿಸಿ, ಆದರೆ ಯಾವುದೇ ಎಸಿ (ಹವಾನಿಯಂತ್ರಕ) ಬಳಸಬಾರದು. ಆಗ ಆ ಮರದ ಆವಶ್ಯಕತೆ ಗೊತ್ತಾಗುತ್ತದೆ. 50 ಡಿಗ್ರಿ ಬೇಸಿಗೆಯಲ್ಲಿ ನಮಗೆ ಆಧಾರವಾಗಿದ್ದ, ಮಳೆ ಬಂದರೆ ನಿಲ್ಲಲು ಸಹಾಯವಾಗಿದ್ದ 200 ವರ್ಷದ ಮರವನ್ನು ಕೇವಲ ಅಭಿವೃದ್ಧಿಗೋಸ್ಕರ ಕಡಿಯಲಾಗಿದೆ. ಅದನ್ನು ನಮ್ಮಿಂದ ಉಳಿಸಲು ಸಾಧ್ಯವಾಗಲಿಲ್ಲ. ಒಂದು ಕಡೆ ಮರ ಕಡಿಯುತ್ತಾರೆ, ಇನ್ನೊಂದು ಕಡೆ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳ, ನೀರಿನ ಕೊರತೆ ಬಗ್ಗೆ ಮಾತನಾಡುತ್ತಾರೆ. ಇದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸಯ್ಯಮಿ ಖೇರ್ ‘ಹೈವಾನ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್