ಫಿಲಿಪ್ಪ ಎಂಬ ಪ್ರೇಷಿತ ಸಂತ

ವಿಜಯವಾಣಿ (6)
Published on

‘ಬಾ, ನನ್ನನ್ನು ಹಿಂಬಾಲಿಸು’ ಎಂಬ ಆ ದಿವ್ಯ ತೇಜಸ್ಸಿನ ಯೇಸುವಿನ ಆಣತಿಗೆ ತಲೆದೂಗಿದ ಫಿಲಿಪ್ಪ ಆತನಲ್ಲಿ ಅದಾವುದೋ ಅಪೂರ್ವ ಶಕ್ತಿಯನ್ನು ಗ್ರಹಿಸಿದ. ಪೇತ್ರ ಮತ್ತು ಸಿಮೋನರಂತೆ ಫಿಲಿಪ್ಪ ಕೂಡ ಮೀನುಗಾರನಾಗಿದ್ದ. ಯೇಸುವಿನೊಂದಿಗಿನ ಮುಖಾಮುಖಿಯ ನಂತರ ಆತ ತನ್ನ ಗೆಳೆಯ ನಥಾನಿಯೇಲನನ್ನು ಕಂಡು ಯೇಸು ಮೋಶೆಯ ಪರಂಪರೆಗೆ ಸೇರಿದವನಂತೆ ಕಾಣುವ ನಝುರೇತಿನವ ಎಂದಾಗ, ನಝುರೇತಿನಿಂದ ಏನಾದರೂ ಒಳಿತು ಆಗಮಿಸಲು ಸಾಧ್ಯವೇ? ಎಂದು ಗೆಳೆಯ ವ್ಯಂಗ್ಯವಾಡಿದ.

ಆದರೆ, ಆತ ಖುದ್ದಾಗಿ ಕ್ರಿಸ್ತನನ್ನು ಕಂಡು, ಆತನ ಬೋಧನೆ ಮತ್ತು ಅದ್ಭುತಗಳಿಗೆ ಸಾಕ್ಷಿಯಾದಾಗ ತನ್ನ ಅಸಂಬಧ್ಧ ನುಡಿಗಳನ್ನು ನುಂಗಿಕೊಳ್ಳಬೇಕಾಯಿತು. ಯೇಸು ಕ್ರಿಸ್ತನ ಒಡನಾಡಿಯಾದ ಫಿಲಿಪ್ಪ ಆತನಲ್ಲಿ ಸಂಪೂರ್ಣ ವಿಶ್ವಾಸ ಹೊಂದಿದ. ಯೇಸುವಿನ ಕರೆ ಆತನಲ್ಲಿ ವಿದ್ಯುತ್ ಸಂಚಾರದಂತೆ ಪರಿಣಮಿಸಿ, ಆತನ ಅಧ್ಯಾತ್ಮಿಕ ರೂಪಾಂತರಕ್ಕೆ ಬುನಾದಿ ಹಾಕಿತ್ತು. ಅದು ಆತನನ್ನು ಬದಲಾಯಿಸಿ, ಇತರ ಅಲ್ಪ ವಿಶ್ವಾಸಿಗಳನ್ನೂ ಯೇಸುವಿನ ಬಳಿಗೆ ಕರೆತರುವಂತೆ ಮಾಡಿತು. ಯೇಸುವಿನ ಸಂಗದಲ್ಲಿ ಆತ ಬದುಕಿನ ನೈಜ ಸತ್ಯಗಳನ್ನು ಅರಿಯಲಾರಂಭಿಸಿದ. ಜನ ಯೇಸುವನ್ನು ನಮಗೆ ಸರ್ವೆಶ್ವರನಾದ ಪಿತನನ್ನು ತೋರಿಸಿ ಎಂದಾಗ, ಯೇಸು, ನನ್ನನ್ನು ನೋಡುವಾತ ಪಿತನನ್ನೂ ನೋಡುತ್ತಾನೆ ಎಂದು ಉತ್ತರಿಸುತ್ತ ಕೇಳುಗರನ್ನು ಬೆರಗಾಗಿಸುತ್ತಿದ್ದ.

ಒಮ್ಮೆ ಬೆಟ್ಟದ ಮೇಲಿನ ಪ್ರಬೋಧನೆಯ ನಂತರ ಯೇಸು ಅಲ್ಲಿ ನೆರೆದಿದ್ದ ಐದು ಸಾವಿರ ವಿಶ್ವಾಸಿಗಳಿಗೆ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಹೊಟ್ಟೆ ತುಂಬುವಷ್ಟು ಉಣಬಡಿಸಿದ ಅದ್ಭುತ ಕಂಡು ಫಿಲಿಪ್ಪನಿಗೆ ಆತನಲ್ಲಿ ಗಾಢವಾದ ವಿಶ್ವಾಸ ಬೆಳೆಯಿತು. ಕೊನೆಯಭೋಜನದ ವೇಳೆ, ಯೇಸು ತನ್ನೆಲ್ಲ ಶಿಷ್ಯರ ಪಾದಗಳನ್ನು ತೊಳೆದಾಗ, ಯೇಸುವನ್ನು ಹಿಂಬಾಲಿಸುವುದೆಂದರೆ, ತ್ಯಾಗ ಬಲಿದಾನಗಳಿಗೆ ತಮ್ಮನ್ನೇ ಒಡ್ಡಿಕೊಳ್ಳುವುದೆಂದು ಅರಿತ. ಆತನ ಶುಭಸಂದೇಶ ಸಾರಲು ಅನೇಕ ಪ್ರಾಂತ್ಯಗಳಿಗೆ ತೆರಳಿದ. ಕೊನೆಗೆ, ಕ್ರಿಸ್ತ ಶಕ 80ರಲ್ಲಿ ಕ್ರೖೆಸ್ತ ವಿರೋಧಿಗಳು ಆತನನ್ನು ಕಲ್ಲುಗಳಿಂದ ಹೊಡೆದು ಸಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net