

ಪ್ರಯಾಗ್ರಾಜ್: ಉತ್ತರಪ್ರದೇಶದ ಅಲಹಾಬಾದ್ನ ಝುಸಿ ಎಂಬಲ್ಲಿ ಮಾಘ ಮೇಳದ ನಿಮಿತ್ತ ಶಿಬಿರ ನಡೆಸುತ್ತಿದ್ದ ಓರ್ವ ಸಾಧುವನ್ನು ಪ್ರಯಾಗ್ ರಾಜ್ ಪೊಲೀಸರು ಬಂಧಿಸಿದ್ದಾರೆ. ಅದಕ್ಕೆ ಕಾರಣ ಆತ ಮಾಡಿದ ಅನಾಚಾರ.
ಪರಮಾರ್ಥ ಉತ್ತಾನ್ ಏವಂ ಅನುಸಂಧಾನ ಸಂಸ್ಥಾನ ಎಂಬ ತನ್ನ ಟ್ರಸ್ಟ್ನಡಿಯಲ್ಲಿ ಸಾಧು ಸಂಜೀವ್ ಕುಮಾರ್ ರೈ (ಸಂಜೀವ್ ಮಹಾರಾಜ್)ನಡೆಸುತ್ತಿದ್ದ ಶಿಬಿರಕ್ಕೆ 14 ವರ್ಷದ ಬಾಲಕಿಯೋರ್ವಳು ಹೂವು ಕೊಡಲು ಬಂದಿದ್ದಳು. ಆಕೆಯ ಮೇಲೆ ಈ ಸಾಧು ಅತ್ಯಾಚಾರ ಮಾಡಿದ್ದರಿಂದ ಆತನನ್ನು ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮಾಘಮೇಳವೆಂದರೆ ಮಿನಿ ಕುಂಭಮೇಳದಂತೆ. ಇದು ಪ್ರಮುಖ ನದಿಗಳ ದಂಡೆಯ ಮೇಲೆ ನಡೆಯುತ್ತದೆ. ಅದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಬಲ್ಲಿಯಾ ಜಿಲ್ಲೆಯ ಗಡ್ವಾರ್ನ ಈ ಸಾಧು ತನ್ನದೇ ಶಿಬಿರ ನಡೆಸುತ್ತಿದ್ದ. ಅವನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಅಮ್ಮ ಮಾಘಮೇಳದ ಮೈದಾನದಲ್ಲಿ ಹೂವು ಮಾರುತ್ತಿದ್ದಳು. ಬಾಲಕಿ ಅಲ್ಲೇ ಸುತ್ತಲಿನ ಹಲವು ಶಿಬಿರಗಳಿಗೆ ಹೂವು ಕೊಡುತ್ತಿದ್ದಳು. ಹಾಗೇ ಫೆ.5ರಂದು ಬಾಲಕಿ ಸಾಧು ಸಂಜೀವ್ ಮಹಾರಾಜ್ನ ಕ್ಯಾಂಪ್ಗೆ ಹೋದಾಗ ಪ್ರಸಾದ ಕೊಡುವುದಾಗಿ ಹೇಳಿ ಒಳಗೆ ಕರೆದು, ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿ ಪಾರಾಗಲು ತುಂಬ ಪ್ರಯತ್ನ ಮಾಡಿದ್ದಾಳೆ. ಆದರೆ ಆಗಲಿಲ್ಲ. ಅಲ್ಲಿಂದ ಬಂದು ಅಮ್ಮನಿಗೆ ವಿಷಯ ತಿಳಿಸಿದ್ದಾಳೆ.
ತಾಯಿಯ ದೂರಿನ ಮೇರೆಗೆ ಸಾಧುವಿನ ವಿರುದ್ಧ ಎಫ್ಐಆರ್ ದಾಖಲಾಗಿದೆ. (ಏಜೆನ್ಸೀಸ್)