

ಶಿವಮೊಗ್ಗ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ 57 ವರ್ಷದ ಮಹಿಳೆಗೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸೈನಿಕ್ ಆರ್ಟರಿ ಎಂಬೋಲೈಸೇಶನ್ ಚಿಕಿತ್ಸೆಯನ್ನು ಆಧುನಿಕ ಇಂಟರ್ವೆನ್ಷನಲ್ ರೇಡಿಯಾಲಜಿ ತಂತ್ರಜ್ಞಾನದಿಂದ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಅರವಿಂದನ್ ಹೇಳಿದರು.
ಹಾವೇರಿಯ ಮಹಿಳೆ ಆಹಾರ ಸೇವಿಸುವಾಗ(ನುಂಗುವಾಗ)ತೊಂದರೆ ಎಂಬ ಕಾರಣಕ್ಕೆ ಮೇ ತಿಂಗಳು ಆಸ್ಪತ್ರೆಗೆ ಬಂದಿದ್ದು, ಎಂಡೋಸ್ಕೊಪಿ ಮತ್ತು ಬಯಾಪ್ಸಿ ಪರೀಕ್ಷೆಯಿಂದ ಅನ್ನನಾಳದ ಕ್ಯಾನ್ಸರ್ ಇರುವುದು ಹಾಗೂ ಪೆಟ್‌ಸಿಟಿ ಸ್ಕಾ ್ಯನಿಂಗ್‌ನಲ್ಲಿ ಅಡ್ವಾನ್ಸ್ ಸ್ಟೇಜ್‌ನಲ್ಲಿರುವುದು (ಸ್ಟೇಜ್-3) ದೃಢಪಟ್ಟಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೆಡಿಕಲ್ ಆಂಕೊಲಾಜಿಸ್ಟ್ ಡಾ. ನಮ್ರತಾ ಉಡುಪ ಅವರು ಮಹಿಳೆಯನ್ನು ಕೀಮೋಥೆರಪಿಗೆ ಒಳಪಡಿಸಿ ಕ್ಯಾನ್ಸರ್ ಗಡ್ಡೆಯನ್ನು ಕುಗ್ಗಿಸಿ ಚಿಕಿತ್ಸೆಗೆ ಅನುವು ಮಾಡಿಕೊಟ್ಟರು. ತನ್ನನ್ನೂ ಸೇರಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಗುರುಚನ್ನ, ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶ್ಚಿತಾ, ಅರಿವಳಿಕೆ ತಜ್ಞ ಡಾ. ಪ್ರವೀಣ್‌ಕುಮಾರ್ ಅವರನ್ನೊಳಗೊಂಡ ತಂಡ 6 ಗಂಟೆ ಚಿಕಿತ್ಸೆ ನಡೆಸಿ ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶ ಭಾಗವನ್ನು ತೆಗೆದು ಎದೆಯ ಭಾಗದಲ್ಲಿ ಜೋಡಿಸಿದೆ ಎಂದರು.
ಕ್ಲಿಷ್ಟ ಚಿಕಿತ್ಸೆಯಲ್ಲಿ ಆಪರೇಷನ್ ನಂತರದ ದಿನಗಳಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚು. ಅದೇ ರೀತಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದ ಮಹಿಳೆಗೆ ಆನಂತರ ತೀವ್ರ ಸುಸ್ತು, ಹೊಟ್ಟೆನೋವು ಕಾಣಿಸಿಕೊಂಡು ವಾಪಸ್ ಆಸ್ಪತ್ರೆಗೆ ಬಂದಾಗ ಹಿಮೋಗ್ಲೋಬಿನ್ ಶೇ.5ಕ್ಕೆ ಇಳಿದಿತ್ತು. ಶೀಘ್ರವೇ ಸಿಟಿ ಸ್ಕಾ ್ಯನ್ ಮಾಡಿದಾಗ ಸ್ಪ್ಲೀನ್ ಎನ್ನುವ ಅಂಗಕ್ಕೆ ರಕ್ತನಾಳದಲ್ಲಿ ಸಣ್ಣ ರಂಧ್ರವಿದ್ದು, ತೀವ್ರ ರಕ್ತಸ್ರಾವವಾಗಿರುವುದು ತಿಳಿದುಬಂದಿತ್ತು. ಸಾಮಾನ್ಯವಾಗಿ ಇಂತ ಸಂದರ್ಭದಲ್ಲಿ ಪುನಃ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಿದ್ದು, ರೋಗಿಯು ಅದನ್ನು ತಡೆದುಕೊಳ್ಳುವುದೂ ಕಷ್ಟವಾಗಬಹುದು ಎಂದು ಹೇಳಿದರು.
ನಮ್ಮ ಆಸ್ಪತ್ರೆಯಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶ್ಚಿತಾ ಅವರು ಆಧುನಿಕ ಚಿಕಿತ್ಸೆಯಲ್ಲಿ ಪರಿಣಿತರಿದ್ದು, ಯಶಸ್ವಿಯಾಗಿ ಕಾಯಿಂಗ್ ಅಥವಾ ಎಂಬೋಲೈಸ್ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ರಕ್ತಸ್ರಾವ ಸ್ಥಗಿತವಾಗಿ ರಾತ್ರಿ ವೇಳೆಗೆ ರೋಗಿಯು ಚೇತರಿಸಿಕೊಂಡು ಹೊಟ್ಟೆ ನೋವು ಶಮನವಾಗಿದೆ. ರೋಗಿಯು ಯಾವುದೇ ತೊಂದರೆ ಇಲ್ಲದೆ ಗುಣವಾಗಿ ಮರುದಿನವೇ ಡಿಸ್ಚಾರ್ಜ್ ಆಗಿರುವುದು ವಿಶೇಷ ಎಂದರು.
ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ನಿಶ್ಚಿತಾ ಮಾತನಾಡಿ, ಇಂಟರ್ವೆನ್ಷನಲ್ ರೇಡಿಯಾಲಜಿ ಎಂದರೆ ಶಸ್ತ್ರಚಿಕಿತ್ಸೆ ಇಲ್ಲದೆ ತೊಡೆ ಸಂಧಿಯ ರಕ್ತನಾಳದ ಮೂಲಕ ಸಣ್ಣ ಸೂಜಿ ಗಾತ್ರದ ರಂಧ್ರದಿಂದ ರಕ್ತ ಸ್ರಾವವಿರುವ ರಕ್ತನಾಳವನ್ನು ಮುಚ್ಚುವುದಾಗಿದೆ. ಆಧುನಿಕ ಮತ್ತು ಕಡಿಮೆ ರಿಸ್ಕ್ ಇರುವ ವಿಧಾನ ಇದಾಗಿದೆ ಎಂದು ತಿಳಿಸಿದರು.
ಮೆಡಿಕಲ್ ಆಂಕೊಲಾಜಿಸ್ಟ್ ಡಾ. ನಮ್ರತಾ ಉಡುಪ, ವಿಕಿರಣ ಶಾಸ್ತ್ರಜ್ಞರಾದ ಡಾ. ಶರಶ್ಚಂದ್ರ, ಅರಿವಳಿಕೆ ತಜ್ಞ ಡಾ. ಪ್ರವೀಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಎಲ್ಲ ಚಿಕಿತ್ಸೆಗಳು ಒಂದೇ ಸೂರಿನಡಿ
ಸಮಗ್ರ ಆರೈಕೆ ಆಸ್ಪತ್ರೆ ಅಂದರೆ ಎಲ್ಲ ಚಿಕಿತ್ಸಾ ವಿಧಾನಗಳೂ ಒಂದೇ ಸೂರಿನಡಿ ಇರುವುದರಿಂದ ಜನರಿಗೆ ಆಗುವ ಉಪಯೋಗವನ್ನು ಇದು ತಿಳಿಸುತ್ತದೆ. ದೊಡ್ಡ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ ಈ ವಿಧಾನಗಳು, ಕೈಗೆಟುಕುವ ವೆಚ್ಚದಲ್ಲಿ ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್‌ನಲ್ಲಿ ಸಿಗುತ್ತಿರುವುದು ವರದಾನವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್ ಮಧ್ಯ ಕರ್ನಾಟಕದಲ್ಲೇ ಆಧುನಿಕ ಚಿಕಿತ್ಸೆ ಕೊಡುತ್ತಿರುವ ಮೊದಲ ಆಸ್ಪತ್ರೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಗುರುಚನ್ನ ಹೇಳಿದರು.