

ನವದೆಹಲಿ: ‘ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು’ ಎಂದು ಹೇಳುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿವಾದ ಸೃಷ್ಟಿಸಿದ್ದಾರೆ. ಶಿವಶಂಕರಪ್ಪ ಅವರ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ವಿಶ್ವದ ನಂ 1 ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಸೈನಾ ನೆಹ್ವಾಲ್ ಕಿಡಿ ಕಾರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೈನಾ, 'ಮಹಿಳೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸಬೇಕು' ಎಂದು ಕರ್ನಾಟಕದ ಪ್ರಮುಖ ನಾಯಕರಾದ ಶಾಮನೂರು ಶಿವಶಂಕರಪ್ಪಾಜಿ ಹೇಳಿದ್ದಾರೆ. 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ, ನಾನು ಹೋರಾಡಬಲ್ಲೆ) ಎಂದು ಹೇಳುವ ಪಕ್ಷ(ಕಾಂಗ್ರೆಸ್)ನಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಿದಾಗ ಮತ್ತು ಕ್ರೀಡೆಯಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಾಗ ಕಾಂಗ್ರೆಸ್ ಪಕ್ಷ ಏನು ಮಾಡಬೇಕೆಂದು ನಿರೀಕ್ಷಿಸಿತ್ತು ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಯುವತಿಯರು ಮತ್ತು ಮಹಿಳೆಯರು ತಮಗಿಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧಿಸಬೇಕೆಂದು ಕನಸು ಕಾಣುತ್ತಿರುವಾಗ, ಮತ್ತೊಂದೆಡೆ ನಾವು 'ನಾರಿ ಶಕ್ತಿ ಕೋ ವಂದನ್' ಮಾಡುತ್ತಿರುವಾಗ ಮಹಿಳೆಯರ ಬಗ್ಗೆ ಈ ರೀತಿಯ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವೇ?. ಇಂತಹ ಸ್ತ್ರೀದ್ವೇಷದ ಮಾತುಗಳು ಬೇಸರ ತರಿಸುತ್ತವೆ ಎಂದಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ನಮ್ಮ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಂಗೀಕರಿಸಲಾಗಿದೆ ಮತ್ತು ಮತ್ತೊಂದೆಡೆ ನಾರಿ ಶಕ್ತಿಗೆ ಅಪಮಾನ ಮಾಡುವಂತೆ ಮತ್ತು ಸ್ತ್ರೀದ್ವೇಷದ ಜನರಿದ್ದಾರೆ. ನಿಜಕ್ಕೂ ಇದು ಬೇಸರ ತರಿಸುತ್ತದೆ ಎಂದು ಸೈನಾ ಪೋಸ್ಟ್ ಮಾಡಿದ್ದಾರೆ.