ಆತ ಡಾನ್ಸ್​ ಮಾಡ್ತಿದ್ದ...ಸೈಫ್​ ಅಲಿ ಖಾನ್​ರನ್ನು ಕಸಕ್ಕೆ ಹೋಲಿಸಿ ಚಾಕು ದಾಳಿಯನ್ನೇ ಶಂಕಿಸಿದ ಮಹಾರಾಷ್ಟ್ರ ಸಚಿವ! Saif Ali Khan

Saif Ali Khan
Published on

Saif Ali Khan : ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಬಾಲಿವುಡ್​ ಖ್ಯಾತ ನಟ ಸೈಫ್​ ಅಲಿ ಖಾನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಪ್ರಕರಣ ಸಂಬಂಧ ಮಹಾರಾಷ್ಟ್ರ ಸಚಿವರೊಬ್ಬರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಸೈಫ್​ ಅಲಿ ಖಾನ್​ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಧಾನದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ದಿನ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದ ವೈದ್ಯರು ಸೈಫ್​ ಅವರ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ಹೇಳಿದ್ದರು. ಆರೋಪಿ 6 ಬಾರಿ ಚಾಕು ಇರಿದಿದ್ದಾನೆ ಎಂದಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡ ವ್ಯಕ್ತಿ ತುಂಬಾ ಆರೋಗ್ಯವಾಗಿರುವಂತೆ ಕಾಣುತ್ತಿದ್ದಾರೆ ಎಂದು ಅನೇಕ ಮಂದಿ ಸೈಫ್​ ಡಿಸ್ಚಾರ್ಜ್​ ಆದ ದಿನ ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ, ಆಸ್ಪತ್ರೆಯಿಂದ ಸೈಫ್​ ಆರಾಮಾಗಿ ನಡೆದುಕೊಂಡು ಬಂದ ರೀತಿಯನ್ನು ಸಹ ಅನೇಕರು ಟೀಕಿಸಿದ್ದರು. ಈ ಬಗ್ಗೆ ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಕೂಡ ಮಾತನಾಡಿದ್ದು, ಹಲ್ಲೆಯ ಘಟನೆ ನಿಜವೇ ಅಥವಾ ಸೈಫ್​ ಅವರು ನಟಿಸುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು ಡಿಸ್ಚಾರ್ಜ್​ ಆದಾಗ ಈ ಅನುಮಾನ ಮೂಡಿತು ಎಂದಿದ್ದಾರೆ.

ಪುಣೆಯ ಸಭೆಯೊಂದರಲ್ಲಿ ಮಾತನಾಡಿದ ರಾಣೆ, ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆಂದು ನೀವೇ ನೋಡಿ. ಅವರು ಸೈಫ್ ಅಲಿ ಖಾನ್ ಮನೆಯನ್ನೇ ಪ್ರವೇಶಿಸಿದ್ದಾರೆ. ಈ ಮೊದಲು ಅವರೆಲ್ಲ ರಸ್ತೆ ಪಕ್ಕದಲ್ಲಿ ನಿಲ್ಲುತ್ತಿದ್ದರು. ಆದರೆ, ಈಗ ಮನೆಗಳನ್ನು ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಬಹುಶಃ ಆತ ಸೈಫ್ ಅವರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಒಳ್ಳೆಯದೇ ಕಸವನ್ನು ತೆಗೆದುಕೊಂಡು ಹೋಗಬೇಕು ಎನ್ನುವ ಮೂಲಕ ನಿತೀಶ್​ ರಾಣೆ, ಸೈಫ್​ ಅವರನ್ನು ವ್ಯಂಗ್ಯವಾಡಿದ್ದಾರೆ.

ಮಾತು ಮುಂದುವರಿಸಿದ ರಾಣೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದಾಗ, ಸೈಫ್​ ನಡೆಯುತ್ತಾ ನೃತ್ಯ ಮಾಡುತ್ತಿದ್ದರು. ಶಾರುಖ್ ಖಾನ್ ಅಥವಾ ಸೈಫ್ ಅಲಿ ಖಾನ್‌ನಂತಹ ಯಾವುದೇ ಖಾನ್ ಗಾಯಗೊಂಡಾಗ, ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಆದರೆ, ಸುಶಾಂತ್ ಸಿಂಗ್ ರಜಪೂತ್‌ನಂತಹ ಹಿಂದೂ ನಟನಿಗೆ ಚಿತ್ರಹಿಂಸೆ ನೀಡಿದಾಗ, ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ. ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವಾದ್) ಮತ್ತು ಬಾರಾಮತಿಯ ತಾಯಿ (ಸಂಸದೆ ಸುಪ್ರಿಯಾ ಸುಳೆ) ಏನನ್ನೂ ಹೇಳಲು ಮುಂದೆ ಬರಲಿಲ್ಲ. ಅವರು ಶಾರುಖ್ ಖಾನ್, ಸೈಫ್ ಅಲಿ ಖಾನ್ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಯಾವುದೇ ಹಿಂದೂ ಕಲಾವಿದನ ಬಗ್ಗೆ ಚಿಂತಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ. ನೀವು ಈ ಎಲ್ಲ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ನಿತೀಶ್​ ರಾಣೆ ಹೇಳಿದರು. ಸದ್ಯ ನಿತೀಶ್​ ರಾಣೆ ನೀಡಿದ ಹೇಳಿಕೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶ್ರಾಂತಿಯಲ್ಲಿ ಸೈಫ್​ ಅಲಿ ಖಾನ್

ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಬಾಲಿವುಡ್​ ಖ್ಯಾತ ನಟ ಸೈಫ್​ ಅಲಿ ಖಾನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಸೈಫ್​ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸೈಫ್​ ಅಲಿ ಖಾನ್​ ಅವರ ಮನೆಯಲ್ಲಿ ಈ ದಾಳಿ ನಡೆದಿತ್ತು. ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆಹ್​ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೈಫ್​ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಬೆನ್ನುಹುರಿ ಸೇರಿದಂತೆ ಸುಮಾರು 6 ಸ್ಥಳಗಳಲ್ಲಿ ಗಾಯಗಳಾಗಿತ್ತು. ವೈದ್ಯರು 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್​ ಯಶಸ್ವಿಯಾಗಿದ್ದು, ಡಿಸ್ಚಾರ್ಜ್​ ಆಗಿದ್ದಾರೆ. ಸುಮಾರು 1 ತಿಂಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ನೀಡಿದ್ದಾರೆ.

ಸೈಫ್​ ಮೇಲೆ ದಾಳಿ ಮಾಡಿದ ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಕಳೆದ ಬುಧವಾರ (ಜ.15) ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್-ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್​ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್​ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್​ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್​ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net