

ಮುಂಬೈ: ( Saif Ali Khan Attack Three Suspects Arrested ) ಬಾಲಿವುಡ್ ನಟ ಸೈಫ್ ಅಲಿ ಖಾನ್ ( Saif Ali Khan ) ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕುಟುಂಬಸ್ಥರು ಕೂಡಲೇ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮೂವರು ಶಂಕಿತರನ್ನು ಪೊಲೀಸರು ಬಂದಿಸಿದ್ದಾರೆ ಎನ್ನುವ ಸುದ್ದಿಯೊಂದು ಲಭ್ಯವಾಗಿದೆ.
ಮುಂಬೈನ ಪೊಲೀಸರು ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮೂವರು ಶಂಕಿತರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ.
ಸೈಫ್ ಅಲಿಖಾನ್ ಚಾಕು ದಾಳಿ ಪ್ರಕರಣದಲ್ಲಿ ಮನೆಕೆಲಸದವರ ಮೇಲೂ ಶಂಕೆ ವ್ಯಕ್ತವಾಗಿದೆ. ನಟನ ಮನೆಗೆ ಎರಡು ಗೇಟ್‌ಗಳಿವೆ. 4 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಳ್ಳ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಮನೆಯಲ್ಲಿ ಯಾರಾದರೂ ಸಹಾಯ ಮಾಡಿದ್ದಾರಾ ಎಂಬ ಪ್ರಶ್ನೆಯೂ ಇದೆ. ಈ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು 7 ತಂಡಗಳನ್ನು ರಚಿಸಿದ್ದಾರೆ. ವಿವಿಧ ಕೋನಗಳಲ್ಲಿ ತನಿಖೆ ನಡೆಯುತ್ತಿದೆ.
ನಡೆದಿದ್ದೇನು?: ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಕಳ್ಳ ಮನೆಗೆ ಪ್ರವೇಶಿಸಿದನ್ನು ಅರಿತುಕೊಂಡ ಮನೆಯ ಸಿಬ್ಬಂದಿ ಎಚ್ಚರಗೊಂಡರು. ಮನೆಯಲ್ಲಿ ಗಲಾಟೆಯಿಂದ ನಿದ್ದೆಯಿಂದ ಎದ್ದ ಸೈಫ್ ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಇದೇ ವೇಳೆ ಕಳ್ಳ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ಘಟನೆ ಬಳಿಕ ಕಳ್ಳ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಶ್ರಮಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಪತ್ನಿ, ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಶೀಘ್ರದಲ್ಲೇ ಪ್ರಕರಣದ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಮನೆಯ ಸುತ್ತ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಗಾಯಗೊಂಡ ಸೈಫ್ ಅವರನ್ನು ಚಿಕಿತ್ಸೆಗಾಗಿ ಸಮೀಪದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಮಾತನಾಡಿ, ಸೈಫ್‌ಗೆ ಆರು ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಆಳವಾದವುಗಳಾಗಿವೆ. ಗಾಯಗಳಲ್ಲಿ ಒಂದು ಅವರ ಬೆನ್ನುಮೂಳೆಯ ಹತ್ತಿರದಲ್ಲಿದೆ. ನಾವು ಅವರಿಗೆ ಆಪರೇಷನ್ ಮಾಡುತ್ತಿದ್ದೇವೆ. ನರಶಸ್ತ್ರಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ನಿಶಾ ಗಾಂಧಿ ಅವರಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರವೇ ಹಾನಿಯ ಪ್ರಮಾಣವನ್ನು ನಾವು ತಿಳಿಸುತ್ತೇವೆ ಎಂದಿದ್ದಾರೆ.
ಕುತ್ತಿಗೆಯ ಮೇಲೆ ಒಂದು ಗಾಯವಿದೆ. ಮುಂಜಾನೆ 5:30ಕ್ಕೆ ಶಸ್ತ್ರಚಿಕಿತ್ಸೆ ಆರಂಭವಾಗಿದ್ದು, ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.