ಪಹಲ್ಗಾಮ್​ ಉಗ್ರ ದಾಳಿಯ ಬಗ್ಗೆ ಸಾಯಿ ಪಲ್ಲವಿ ಟ್ವೀಟ್​ ಮಾಡಿದ್ದೇ ತಡ ನೆಟ್ಟಿಗರಿಂದ ಆಕ್ರೋಶ! ಕಾರಣವೇನು? Sai Pallavi

Sai Pallavi
Published on

Sai Pallavi : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಸೇರಿದಂತೆ ಇಡೀ ಜಗತ್ತೇ ತೀವ್ರವಾಗಿ ಖಂಡಿಸುತ್ತಿದೆ. ಇದೊಂದು ಹೇಯ ಕೃತ್ಯ ಎಂದು ಟೀಕಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ ಮತ್ತು ರಾಜಕೀಯ ಸೇರಿದಂತೆ ಹಲವು ಕ್ಷೇತ್ರದ ಗಣ್ಯ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಉಗ್ರರ ವಿರುದ್ಧ ಪ್ರತೀಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಸ್ಯಾಂಡಲ್​​ವುಡ್​ನಲ್ಲಿ ನಟ ಸುದೀಪ್​, ಶಿವರಾಜ್​ಕುಮಾರ್​ ಸೇರಿದಂತೆ ಅನೇಕರು ಭೀಕರ ದಾಳಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ, ಮಹೇಶ್ ಬಾಬು, ಅಲ್ಲು ಅರ್ಜುನ್ ಮತ್ತು ಎಲ್ಲ ದೊಡ್ಡ ನಾಯಕರು ಈಗಾಗಲೇ ಈ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ, ಸಾಯಿ ಪಲ್ಲವಿ ಕೂಡ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸುತ್ತಾ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಒಂದು ಹಂಚಿಕೊಂಡಿದ್ದಾರೆ.

ಪಹಲ್ಗಾಮ್​ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯಿಂದ ಉಂಟಾದ ನಷ್ಟ, ನೋವು ಮತ್ತು ಭಯ ನನಗೂ ವೈಯಕ್ತಿಕ ಎನಿಸಿದೆ. ಇತಿಹಾಸದಲ್ಲಿ ನಡೆದ ಭಯಾನಕ ಅಪರಾಧಗಳ ಬಗ್ಗೆ ತಿಳಿದುಕೊಂಡು ಇನ್ನೂ ಅಂತಹ ಅಮಾನವೀಯ ಕೃತ್ಯಗಳನ್ನು ನೋಡುತ್ತಿರುವಾಗ, ಏನೂ ಬದಲಾಗಿಲ್ಲ ಎಂದು ನನಗೆ ಅರಿವಾಗುತ್ತದೆ. ಆ ಮೃಗಗಳ (ಉಗ್ರರು) ಗುಂಪು ಉಳಿದಿರುವ ಸಣ್ಣ ಭರವಸೆಯನ್ನು ಅಳಿಸಿಹಾಕಿವೆ ಎಂದು ಸಾಯಿ ಪಲ್ಲವಿ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಕುಟುಂಬದೊಂದಿಗೆ ಸುಮಧುರ ನೆನಪುಗಳನ್ನು ಸೃಷ್ಟಿಸಲು ಬಯಸುವ ಮನಸ್ಥಿತಿಯೊಂದಿಗೆ ಹೋದವರು ಇದೀಗ ಕುಟುಂಬದ ಮುಂದೆಯೇ ಕಣ್ಮರೆಯಾಗುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಇದು ನಮ್ಮ ಮೂಲವನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಇದು ಅಸಹಾಯಕ ಮತ್ತು ಶಕ್ತಿಹೀನ ಸ್ಥಿತಿ. ಮುಗ್ಧ ಜೀವಗಳನ್ನು ಕಳೆದುಕೊಂಡವರಿಗೆ ಮತ್ತು ದುಃಖದಲ್ಲಿರುವ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಪ್ರಾರ್ಥನೆಗಳು ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದೇ ತಡ, ಅನೇಕ ನೆಟ್ಟಿಗರು ಸಾಯಿ ಪಲ್ಲವಿಯನ್ನು ಟೀಕಿಸುವ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಸಾಯಿ ಪಲ್ಲವಿ ಹಿಂದೆ ಭಾರತೀಯ ಸೇನೆಯ ಬಗ್ಗೆ ಮಾಡಿದ್ದ ಕಾಮೆಂಟ್‌ಗಳು.

ಹೌದು, ಸಾಯಿ ಪಲ್ಲವಿ 2020ರಲ್ಲಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದರು. ನಕ್ಸಲರ ಬಗ್ಗೆ ಆ್ಯಂಕರ್ ಕೇಳಿದ ಪ್ರಶ್ನೆಗೆ ಸಾಯಿ ಪಲ್ಲವಿ ನೀಡಿದ ಉತ್ತರ ವಿವಾದಕ್ಕೀಡಾಗಿತ್ತು. ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು ಅಂದರೆ, ಭಾರತೀಯ ಸೇನೆಯು ಪಾಕಿಸ್ತಾನಿ ಜನರನ್ನು ಭಯೋತ್ಪಾದಕರಂತೆ ನೋಡುತ್ತದೆ ಮತ್ತು ಪಾಕಿಸ್ತಾನದ ಜನರು ಕೂಡ ಅದೇ ರೀತಿ ನೋಡುತ್ತಾರೆ. ಯಾವುದೇ ರೀತಿಯ ದಾಳಿ ಸರಿಯಲ್ಲ ಎಂದು ಹೇಳಿದ್ದರು.

ಅಲ್ಲದೆ, ಈ ಹಿಂದೆ ಕಾಶ್ಮೀರಿ ಫೈಲ್ಸ್​ ಸಿನಿಮಾ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ಗೋವಿನ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗುರಿಯಾಗಿತ್ತು.

ಇದೀಗ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸಾಯಿ ಪಲ್ಲವಿ ಪೋಸ್ಟ್ ಮಾಡಿದರೆ, ಹಳೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಮತ್ತೊಮ್ಮೆ ಟೀಕಿಸಲಾಗುತ್ತಿದೆ. ಆದರೆ, ಕೆಲವರು ಸಾಯಿ ಪಲ್ಲವಿಯನ್ನು ಬೆಂಬಲಿಸಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net