

ನಾಗಚೈತನ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಂದು ಮೊಂಡೇಟಿ ನಿರ್ದೇಶನದ ಚಿತ್ರ ‘ಥಂಡೆಲ್’. ಮೀನುಗಾರ, ಸಮುದ್ರ, ದೇಶಪ್ರೇಮ, ಹೋರಾಟದ ಸುತ್ತ ಸಾಗುವ ಕಥೆ ಇದಾಗಿದ್ದು, ಸದ್ಯ ಚಿತ್ರತಂಡ ಕರ್ನಾಟಕದ ಕಡಲು ತೀರ ಉಡುಪಿಯಲ್ಲಿ ಭರದಿಂದ ಚಿತ್ರೀಕರಣ ನಡೆಸಿದೆ.
ಈ ನಡುವೆ ಶನಿವಾರ (ಜ. 6) ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲಾಗಿದೆ. ಮೀನುಗಾರನ ಪಾತ್ರದಲ್ಲಿ ನಾಗಚೈತನ್ಯ ಕಾಣಿಸಿಕೊಂಡಿದ್ದು, ಪಾಕಿಸ್ತಾನಿ ಅಧಿಕಾರಿ ಎದುರು ಮಾಸ್ ಡೈಲಾಗ್ ಹೇಳುವ ಮೂಲಕ ಗಮನಸೆಳೆಯುತ್ತಾರೆ. ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ. 2022ರಲ್ಲಿ ‘ವಿರಾಟ ಪರ್ವಂ’ ಹಾಗೂ ‘ಗಾರ್ಗಿ’ ಸಿನಿಮಾಗಳಲ್ಲಿ ನಟಿಸಿದ್ದ ಸಾಯಿ ಪಲ್ಲವಿ ಕಳೆದ ವರ್ಷ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ‘ಥಂಡೆಲ್’ನಲ್ಲಿ ನಾಗಚೈತನ್ಯ ಪ್ರೇಯಸಿ ‘ಬುಜ್ಜಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಮುದ್ರದ ದಡದಲ್ಲಿ ಹೆಜ್ಜೆ ಹಾಕುವುದನ್ನು ಟೀಸರ್‌ನಲ್ಲಿ ನೋಡಬಹುದು.
ಇನ್ನು ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ, ಶಾಮ್‌ದತ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನವಿರಲಿದೆ. ಇದರ ಜತೆಗೆ ಸಾಯಿ ಪಲ್ಲವಿ ಇನ್ನೊಂದು ಹೆಸರಿಡದ ತಮಿಳು ಚಿತ್ರವೊಂದರಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್