ಕಡಲ ಉದ್ಯಮ ವಿಸ್ತರಣೆಗೆ ಸಾಗರಮಾಲಾ

7-67f01cd6309a0
Published on

| ಆರ್.ತುಳಸಿಕುಮಾರ್ ಬೆಂಗಳೂರು

ಭಾರತದ ನೌಕಾಪಡೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ರೀತಿಯಲ್ಲೇ, ಕಡಲ ಉದ್ಯಮದಲ್ಲೂ ಬೃಹತ್ ಸಾಧನೆ ಮಾಡಲು ಕೇಂದ್ರ ಸರ್ಕಾರವು ಭಾರತಮಾಲಾ 2.0 ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುವಲ್ಲಿ ನಿರತವಾಗಿದೆ. ದೇಶವು ಸ್ವಾತಂತ್ರ್ಯದ ಶತಮಾನೋತ್ಸವ (2047) ಆಚರಿಸುವ ವೇಳೆಗೆ ಸಮುದ್ರ ಉದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ.

ನಮ್ಮ ರಾಷ್ಟ್ರವು 7,516 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ಇಷ್ಟು ದೊಡ್ಡ ಪ್ರಮಾಣದ ಕರಾವಳಿಯನ್ನು ಸದ್ಬಳಕೆ ಮಾಡಿಕೊಂಡು ದೇಶದ ಆರ್ಥಿಕತೆ ವಿಸ್ತರಣೆಗಾಗಿ ಮುನ್ನೋಟ ರೂಪಿಸಲಾಗಿದೆ. ಸಾಗರಮಾಲಾ 2.0 ಕಾರ್ಯಕ್ರಮ ಜಾರಿಗೆ 40 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ದಶಕದೊಳಗೆ 12 ಲಕ್ಷ ಕೋಟಿ ರೂ. ಹೂಡಿಕೆಗೆ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮದಡಿ 5.79 ಲಕ್ಷ ಕೋಟಿ ರೂ. ಮೊತ್ತದ 839 ಯೋಜನೆಗಳನ್ನು ಗುರುತಿಸಲಾಗಿದೆ. ಈವರೆಗೆ 272 ಯೋಜನೆಗಳಲ್ಲಿ 1.41 ಲಕ್ಷ ಕೋಟಿ ರೂ. ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಹಡುಗು ನಿರ್ವಣ, ಬಂದರುಗಳ ಮೇಲ್ದರ್ಜೆ, ಕರಾವಳಿ ತೀರದು ದ್ದಕ್ಕೂ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಂಕಲ್ಪ ಕೈಗೊಳ್ಳಲಾಗಿದೆ. ಪ್ರಸ್ತುತ ನಮ್ಮ ರಾಷ್ಟ್ರದ ವ್ಯಾಪಾರದಲ್ಲಿ ಶೇ.95 ಭಾಗ ಸಾಗರದ ಮೂಲಕವೇ ನಡೆಯುತ್ತಿದೆ. ದೇಶದ ಪೂರ್ವ ಕರಾವಳಿ ಮೂಲಕ ಆಗ್ನೇಯ ಏಷ್ಯಾ, ಆಸಿಯಾನ್ ರಾಷ್ಟ್ರಗಳು ಹಾಗೂ ಪಶ್ಚಿಮ ಕರಾವಳಿ ಮೂಲಕ ಮಧ್ಯ ಪ್ರಾಚ್ಯ, ಯೂರೋಪ್, ಆಫ್ರಿಕಾ ರಾಷ್ಟ್ರಗಳೊಂದಿಗೆ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಕಡಲ ಉದ್ಯಮವನ್ನು ಪ್ರೋತ್ಸಾಹಿಸಲಾಗುತ್ತಿದೆ.

ಕಡಲ ದಿನ ಆಚರಣೆ ಏಕೆ?

1919ರ ಏ.5ರಂದು ಭಾರತೀಯ ಹಡುಗು ತನ್ನ ಮೊದಲ ಸಮುದ್ರಯಾನವನ್ನು ಆರಂಭಿಸಿತು. ಅಂದು ಎಸ್​ಎಸ್ ಲಾಯಲ್ಟಿ ಹೆಸರಿನ ಹಡುಗು ಮುಂಬೈನಿಂದ ಲಂಡನ್​ಗೆ ಪ್ರಯಾಣಿಸಿ ಹೊಸ ಇತಿಹಾಸ ಬರೆಯಿತು. ಇದರ ನೆನಪಿಗಾಗಿ 1964ರ ಏ.5ರಂದು ಮೊದಲ ಬಾರಿಗೆ ‘ರಾಷ್ಟ್ರೀಯ ಕಡಲ ದಿನ’ವನ್ನಾಗಿ ಆಚರಿಸಲಾಯಿತು. ಕಡಲ ವ್ಯಾಪಾರ, ಶಿಪ್ಪಿಂಗ್ ಹಾಗೂ ಸಮದ್ರಯಾನದಲ್ಲಿ ಭದ್ರತೆ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅವಕಾಶ, ಸವಾಲು

ಕಡಲ ಉದ್ಯಮವು ಕಡಿಮೆ ದರದಲ್ಲಿ ಸರಕು ಸಾಗಣೆಗೆ ಹೆಚ್ಚು ಅವಕಾಶ ಕಲ್ಪಿಸುತ್ತದೆ. ಜಾಗತಿಕ ಸಂಪರ್ಕ, ಬೃಹತ್ ಪ್ರಮಾಣದಲ್ಲಿ ಸರಕು ಸಾಗಣೆಗೂ ವಿಪುಲಾವಕಾಶಗಳಿವೆ. ಉದ್ಯೋಗಾವಕಾಶ ಸಾಗರದಷ್ಟಿದೆ. ಆದರೆ, ಉದ್ಯಮ ವಿಸ್ತಾರಗೊಳ್ಳುತ್ತಿರುವು ದರಿಂದ ಸಮುದ್ರ ಮಾಲಿನ್ಯಕ್ಕೆ ಆಸ್ಪದ ನೀಡಿದಂತಿದೆ. ಕಡಲ್ಗಳ್ಳರ ಹಾವಳಿ, ಹವಾಮಾನ ಬದಲಾವಣೆ, ಹೊಸ ತಂತ್ರಜ್ಞಾನದ ಅಗತ್ಯತೆಯ ಸವಾಲು ಈ ಉದ್ಯಮಕ್ಕಿದೆ.

ಜಲಮೆಟ್ರೋ ಸೇವೆ

ದೇಶದಲ್ಲಿ ಈಗ ವಾಟರ್​ವೆುಟ್ರೋ ಯೋಜನೆಗಳು ಸದ್ದು ಮಾಡತೊಡ ಗಿವೆ. ಕೇರಳದಲ್ಲಿ ಮೊದಲ ಯೋಜ ನೆಗೆ ಚಾಲನೆ ದೊರೆತ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿ ಹೊಸ ಪ್ರಾಜೆಕ್ಟ್ ಗಳು ಮುನ್ನೆಲೆಗೆ ಬರುತ್ತಿವೆ. ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಯಲ್ಲಿ ಜಲಮೆಟ್ರೋ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಜಲಸಾರಿಗೆಯಿಂದ ಅಭಿವೃದ್ಧಿ ಉಜ್ವಲ

ಕರ್ನಾಟಕದಲ್ಲಿ 320 ಕಿ.ಮೀ. ಉದ್ದದ ಕರಾವಳಿ ಇದ್ದು, ಜಲಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಗಳಿವೆ. ಇದಕ್ಕೆ ಪೂರಕವಾಗಿ ಈಗಾಗಲೇ ‘ಕರ್ನಾಟಕ ಜಲಸಾರಿಗೆ ನೀತಿ’ಗೆ ಮಂಜೂರಾತಿ ನೀಡಲಾಗಿದೆ. ಕರಾವಳಿಯಲ್ಲಿ ವ್ಯವಸ್ಥಿತ ಮೂಲಸೌಕರ್ಯ ಕಲ್ಪಿಸಲು ಹಾಗೂ ನೌಕಾ ಚಟುವಟಿಕೆಗಳ ನಿರ್ವಹಣೆಯಲ್ಲಿ ದಕ್ಷತೆ ತರಲು ಸರ್ಕಾರ ಗಮನ ಹರಿಸಿದೆ. ಮಂಗಳೂರಿ ನಲ್ಲಿ ಜಾಗತಿಕ ಮಟ್ಟದ ಕ್ರೂಸ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಪಿಪಿಪಿ ಅಡಿಯಲ್ಲಿ ಯೋಜನೆಗಳ ಜಾರಿ

ರಾಜ್ಯ ಸರ್ಕಾರ ಕಡಲು ಉದ್ಯಮ ಪ್ರೋತ್ಸಾಹಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳಿಗೆ ಆದ್ಯತೆ ನೀಡಿದೆ. ಉತ್ತರಕನ್ನಡ ಜಿಲ್ಲೆಯ ಕೇಣಿಯಲ್ಲಿ ಪಿಪಿಪಿ ಅಡಿಯಲ್ಲಿ 30 ಎಂಟಿಪಿಎ ಸಾಮರ್ಥ್ಯದ ಆಳಸಮುದ್ರ ಸರ್ವಋತು ಬಂದರು ಅಭಿವೃದ್ಧಿಗೆ ಟೊಂಕ ಕಟ್ಟಿದೆ. ಉತ್ತರಕನ್ನಡದ ಪಾವಿನಕುರ್ವೆಯಲ್ಲಿ ಬೃಹತ್ ಬಂದರು ಅಭಿವೃದ್ಧಿ, ಕಾರವಾರ, ಮಲ್ಪೆ ಹಾಗೂ ಹಳೇ ಮಂಗಳೂರು ಬಂದರುಗಳಲ್ಲಿ 4 ಬರ್ತ್​ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net